ಬಂಟ್ವಾಳ: ಒಬ್ಬರೇ ಶಿಕ್ಷಕರಿರುವ ಶಾಲೆಗ ಮಕ್ಕಳ ಅನುಕೂಲಕ್ಕಾಗಿ ಕಡ್ಡಾಯವಾಗಿ ಇನ್ನೋರ್ವ ಶಿಕ್ಷಕರನ್ನು ನೇಮಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಖುದ್ದು ಮುತುವರ್ಜಿ ವಹಿಸಬೇಕು ಎಂದು ಗುರುವಾರ ನಡೆದ ಬಂಟ್ವಾಳ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಇಲಾಖಾವಾರು ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಅವರು ಒಂದು ಶಾಲೆಯಲ್ಲಿ ಒಬ್ಬನೇ ಶಿಕ್ಷಕನಿದ್ದರೆ ಇಲಾಖೆಯ ಸಭೆ, ಇನ್ನಿತರ ಚಟುವಟಿಕೆ ಹಾಗೂ ಅವರು ರಜೆ ಹಾಕಿ ತೆರಳಿದ ಸಂದರ್ಭದಲ್ಲಿ ಶಾಲಾ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆಯಲ್ಲದೆ ಶಾಲೆಯ ಪರಿಸ್ಥಿತಿಯನ್ನೂ ಕೂಡಾ ಕೇಳುವವರಿಲ್ಲದಂತಾಗುತ್ತದೆ. ಹಾಗಾಗಿ ತಾಲೂಕಿನಲ್ಲಿ ಇಂತಹ ಶಾಲೆಗಳಿದ್ದರೆ ಶಿಕ್ಷಣಾಧಿಕಾರಿಯವರು ಗುರುತಿಸಿ ಅಲ್ಲಿಗೆ ಕಡ್ಡಾಯವಾಗಿ ಇನ್ನೋರ್ವ ಶಿಕ್ಷಕನನ್ನು ನಿಯುಕ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಅದೇ ರೀತಿ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಶಿಕ್ಷಕರನ್ನು ನಿಯೋಜನೆ ಅಥವಾ ವರ್ಗಾವಣೆ ಮಾಡಿದಲ್ಲಿ ಅಂತಹ ಶಿಕ್ಷಕರು ಇಲಾಖಾಧಿಕಾರಿಗಳ ಆದೇಶವನ್ನು ಕಡ್ಡಾಯವಾಗಿ ಪಾಲಿಸುವ ನಿಟ್ಟಿನಲ್ಲೂ ಶಿಕ್ಷಣಾಧಿಕಾರಿಯವರು ಕ್ರಮ ಕೈಗೊಳ್ಳಬೇಕು. ಹಾಗೆಯೇ ಶಿಕ್ಷಕರಿಲ್ಲ ಎಂಬ ನೆಪದಲ್ಲಿ ಪ್ರಾಥಮಿಕ ಶಾಲೆಯ ಮುಗ್ದ ಮಕ್ಕಳನ್ನು ಪ್ರತಿಭಟನೆಗೆ ಪ್ರಚೋದಿಸುವುದು ನಾಚಿಕೆಗೇಡಿನ ಸಂಗತಿ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಜಿಪಂ ಸದಸ್ಯೆ ಜಯಶ್ರೀ ಕೊಡಂದೂರು ಅವರು ತಮ್ಮ ಕ್ಷೇತ್ರವಾಪ್ತಿಯ ಶಾಲೆಯೊಂದಕ್ಕೆ ನಿಯೋಜನೆಗೊಂಡ ಅದ್ಯಾಪಕರು ಇನ್ನು ಕೂಡಾ ಕರ್ತವ್ಯಕ್ಕೆ ಬಾರದಿರುವ ಬಗ್ಗೆ ಪ್ರಶ್ನಿಸಿದಾಗ ಮಧ್ಯೆ ಪ್ರವೇಶಿಸಿದ ಎಂ.ಎಸ್.ಮುಹಮ್ಮದ್ ಅವರು ಮೇಲಾಧಿಕಾರಿಗಳ ಆದೇಶವನ್ನೇ ಅಧ್ಯಾಪಕರು ಪಾಲಿಸುತ್ತಿಲ್ಲ ಎಂದಾದರೆ ತಮ್ಮ ಆದೇಶಕ್ಕೂ ಬೆಲೆಯಾದರೂ ಏನು? ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಮಾನದಂಡ ಸರಲೀಕರಣಗೊಳಿಸಿ: ಬಸವ ಸೇರಿದಂತೆ ಇನ್ನಿತರ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೆಲವೊಂದು ಕಾನೂನುಗಳ ತೊಡಕಿನಿಂದ ವಸತಿ ಮನೆ ನೀಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಫಲಾನುಭವಿಯ ಅಥವಾ ಅವಳ ಗಂಡನ ಹೆಸರಿನಲ್ಲಿರುವ ನಿಯಮವನ್ನು ಸರಳೀಕರಣಗೊಳಿಸಿ ಫಲಾನುಭವಿಗಳ ರಕ್ತ ಸಂಬಂಧಿಗಳ ಹೆಸರಿನಲ್ಲಿ ನಿವೇಶನವಿದ್ದರೂ ಅವರಿಗೆ ಒಪ್ಪಿಗೆ ಆಧಾರದಲ್ಲಿ ಮನೆಮಂಜೂರುಗೊಳಿಸಬೇಕೆಂದು ಸದಸ್ಯ ಪ್ರಭಾಕರ್ ಪ್ರಭು ಒತ್ತಾಯಿಸಿದರು. ಹಾಗೆಯೇ 9/11ನಿಂದಾಗಿ ಗ್ರಾಮೀಣ ಭಾಗದ ಜನರ ಖಾತೆ ಬದಲಾವಣೆಗೂ ತೊಂದರೆಯಾಗುತ್ತಿದ್ದು ಈ ನಿಟ್ಟಿನಲ್ಲೂ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ್‍ಗಳಲ್ಲಿನ ಈಸ್ವತ್ತುನಿಂದಿಗೆ ಪಂಚತಂತ್ರ ಸ್ವಾಫ್ಟವೇರ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಪ್ರಭಾಕರ್ ಪ್ರಭು ಒತ್ತಾಯಿಸಿದರು. ಈ ಕುರಿತಾಗಿ ಸಭೆ ನಿರ್ಣಯ ಕೈಗೊಂಡು ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಸದಸ್ಯರ ಕಡೆಗಣನೆ: ಎರಡು ದಿನಗಳ ಹಿಂದೆಯಷ್ಟೇ ಸಂಗಬೆಟ್ಟು ಜಿಪಂ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್‍ನ ಹರಿಜನ – ಗಿರಿಜನ ಕಾಲನಿಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ತಮ್ಮ ಪಕ್ಷದ ಕೆಲ ನಾಯಕರನ್ನು ಮಾತ್ರ ಕರೆದುಕೊಂಡು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲನ್ಯಾಸ ನೆರವೇರಿಸಿದ್ದು ಈ ಭಾಗದ ಗ್ರಾಪಂ ಅಧ್ಯಕ್ಷ, ಸದಸ್ಯರು ಸಹಿತ ತಾಪಂ ಸದಸ್ಯರನ್ನು ಸೌಜನ್ಯಕ್ಕೂ ಕರೆಯದೆ ಕಡೆಗನಿಸಿದ್ದಾರೆ ಎಂದು ಸದಸ್ಯ ರಮೇಶ್ ಕುಡ್ಮೇರು ಅವರು ಸಭೆಯ ಗಮನೆ ಸೆಳೆದರೆ ಇನ್ನೋರ್ವ ಸದಸ್ಯ ಇತ್ತೀಚೆಗೆ ವಿಟ್ಲದಲ್ಲಿ ನಡೆದ ಜನಸಂಪರ್ಕ ಸಭೆಯ ಮಾಹಿಯನ್ನು ತನಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಅವರು ಇದು ನನ್ನ ಗಮನಕ್ಕೂ ಬಂದಿದ್ದು ಕೆಲ ಸಿಬ್ಬಂದಿಗಳ ಅವಾಂತರದಿಂದ ಈ ರೀತಿಯಾಗಿದೆ. ಸಭೆಯ ಬ್ಯಾನರನ್ನು ಕೂಡಾ ಸಭೆ ಮುಗಿದ ಬಳಿಕ ತಂದಿರುತ್ತಾರೆ. ನಿರ್ಲಕ್ಷ್ಯತನ ತೋರಿದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉತ್ತರಿಸಿದರೆ, ಈಗಾಗಲೇ ಹಲವು ಬಾರಿ ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರವನ್ನು ಇಲಾಖಾಧಿಕಾರಿಗಳಿಗೂ ಸೂಚನೆ ನೀಡಿದ್ದರೂ ಮತ್ತೆ ಮತ್ತೆ ಅದೇ ತಪ್ಪುಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ಗರಂ ಆದ ಚಂದ್ರಹಾಸ ಕರ್ಕೇರ ಅವರು ಇದೇ ಕೊನೆ. ಮತ್ತೆ ಇಂತಹ ಪ್ರಸಂಗ ಸಭೆಯಲ್ಲಿ ಪ್ರಸ್ತಾಪವಾದರೆ ಅಂತಹ ಇಲಾಖಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೌರ್ಯ ಪ್ರಶಸ್ತಿಗೆ ಶಿಫಾರಸು: ಹೆಬ್ಬಾವಿನೊಂದಿಗೆ ಸೆಣಸಾಡಿ ಪ್ರಾಣಾಪಾಯದಿಂದ ಪಾರಾದ ಸಜಿಪದ ಶಾಲಾ ಬಾಲಕ ವೈಶಾಖ್‍ಗೆ ಮಕ್ಕಳ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲು ಸಭೆ ನಿರ್ಣಯಿಸಿತು. ಚೆಂಬೇರಿ ಮೀನು ತಿಂದು ಬಂಟ್ವಾಳ ತಾಲೂಕಿನಲ್ಲಿ ಅಸ್ವಸ್ಥರಾದ 5 ಪ್ರಕರಣಗಳು ಮಾತ್ರ ಇಲಾಖೆಯಲ್ಲಿ ದಾಖಲಾಗಿದೆ ಎಂದು ಸದಸ್ಯರ ಪ್ರಶ್ನೆಯೊಂದಕ್ಕೆ ಆರೋಗ್ಯಾಧಿಕಾರಿ ದೀಪಾಪ್ರಭು ಸಭೆಗೆ ಮಾಹಿತಿ ನೀಡಿದರು.
94ಸಿ ವಿವಾದ: 2012ಕ್ಕಿಂತ ಮೊದಲು ಸರಕಾರಿ ನಿವೇಶನದಲ್ಲಿ ಮನೆ ಕಟ್ಟಿ ಕುಳಿತವರಿಗೆ ಯಾವುದೇ ದಾಖಲೆಪತ್ರಗಳನ್ನು ಕೇಳದೆ ಹಕ್ಕು ಪತ್ರ ನೀಡಲಾಗುವುದು ಎಂದು ಇತ್ತೀಚೆಗೆ ವಿಟ್ಲದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಂಗಳೂರು ಸಹಾಯಕ ಕಮೀಷನರ್ ಅವರು ಸ್ಪಷ್ಟ ಪಡಿಸಿದ್ದರಾದರೂ ಕೆಲವು ಗ್ರಾಮ ಕರಣಿಕರು ಫಲಾನುಭವಿಗಳಿಂದ ಆಧಾರ್, ಮನೆ ನಂಬ್ರ ಸಹಿತ ಕೆಲ ದಾಖಲೆಗಳನ್ನು ಕೇಳಿ ಸತಾಯಿಸುತ್ತಿದ್ದಾರೆ ಎಂದು ಸದಸ್ಯ ಎಂ.ಎಸ್.ಮುಹಮ್ಮದ್ ಅವರು ಸಭೆಯ ಗಮನ ಸೆಳೆದರು. ಈ ಬಗ್ಗೆ ತಹಶೀಲ್ದಾರ್ ಪುರಂದರ ಹೆಗಡೆ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ಗ್ರಾಮ ಕರಣಿಕರಿಗೆ ಮನವರಿಕೆ ಮಾಡಲಾಗುವುದು ಎಂದರು.
ಸದಸ್ಯೆ ಗರಂ: ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಅವರು ಸಭೆಗೆ ಆಗಮಿಸಿದ ತಕ್ಷಣ ಇಒ ಅವರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಂಜುಳಾ ಮಾವೆ ಅವರು ಗರಂ ಆಗಿ ತಾನು ಸಭೆಗೆ ಆಗಮಿಸಿ ಒಂದು ಗಂಟೆಯಾದರೂ ತನಗೆ ತಾವು ಸ್ವಾಗತ ಕೋರಿಲ್ಲ. ಇದು ಸಭಾ ನಡವಳಿಯ ಸಭ್ಯತೆಯೇ ಎಂದು ಅಧ್ಯಕ್ಷರ ಗಮನ ಸೆಳೆದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭಾಧ್ಯಕ್ಷತೆ ವಹಿಸಿ ಕಲಾಪ ನಡೆಸಿದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಹಶೀಲ್ದಾರ್ ಪುರಂದರ ಹೆಗಡೆ ವೇದಿಕೆಯಲ್ಲಿದ್ದರು. ಸದಸ್ಯರಾದ ಉಸ್ಮಾನ್ ಕರೋಪಾಡಿ, ಆದಂ ಕುಂಞÂ, ಮಂಜುಳಾ, ಗಣೇಶ್ ಸುವರ್ಣ, ಮಲ್ಲಿಕಾ ಶೆಟ್ಟಿ, ಯಶವಂತ ಪೂಜಾರಿ, ಪದ್ಮಶ್ರೀ, ಮಾಬಲ ಆಳ್ವ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.
9ರಂದು ಸಿಎಂ ಜಿಲ್ಲೆಗೆ
ಉಪ್ಪಿನಂಗಡಿಯ ಕೊಯ್ಲದಲ್ಲಿ ನಿರ್ಮಾಣಗೊಳ್ಳಲಿರುವ ಪಶುವೈದ್ಯಕೀಯ ಕಾಲೇಜಿನ ಶಿಲನ್ಯಾಸಕ್ಕೆ ಅ. 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸಭೆಗೆ ಮಾಹಿತಿ ನೀಡಿ ಎಲ್ಲಾ ಸದಸ್ಯರು ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಕೋರಿದರು. ಅಂದು ಮಧ್ಯಾಹ್ನ 1 ಗಂಟೆಗೆ ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ನಿರ್ಮಾಣಗೊಂಡಿರುವ ಸುಸಜ್ಜಿತ ‘ಜೋಡುಮಾರ್ಗ ಉದ್ಯಾನವನ’ವನ್ನು ಕೂಡಾ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಉಪಾಧ್ಯಕ್ಷ ಅಬ್ಬಾಸ್ ಅಲಿ ತಿಳಿಸಿದರು.
ಅಪ್ನದೇಶ್ ಕಾರ್ಯಕ್ರಮದಡಿಯಲ್ಲಿ ಉತ್ತಮ ನಿರ್ವಹಣೆ, ತೋಟಗಾರಿಕೆ, ಸ್ವಚ್ಛತೆಯಲ್ಲಿ, ಶೈಕ್ಷಣಿಕ ಭೌತಿಕ ಪ್ರಗತಿಯಲ್ಲಿ ಸಾಧನೆಗೈದ ಬಂಟ್ವಾಳ ತಾಲೂಕಿನ ಸುರಿಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಶದಲ್ಲೇ 3ನೆ ಸ್ಥಾನ ಪಡೆದಿದೆ. ಹಾಗೆಯೇ ಕರ್ನಾಟಕ ರಾಜ್ಯದಿಂದ ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಏಕೈಕ ಶಾಲೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸರ್ವ ಸದಸ್ಯರು ಮೇಜುತಟ್ಟಿ ಅಭಿನಂದಿಸಿದರು.

