ಬಂಟ್ವಾಳ: ಗೋಕರ್ಣ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ವಿಚಾರದಲ್ಲಿ ಸರಕಾರದ ಅನಗತ್ಯ ಹಸ್ತಕ್ಷೇಪದ ವಿರುದ್ಧ ಮಾಣಿ ಹವ್ಯಕ ವಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತಾಗಿ ಬಂಟ್ವಾಳ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು ಸರಕಾರದ ನಡೆಯನ್ನು ಖಂಡಿಸಿದೆ.
2008ರಲ್ಲಿ ಗೋಕರ್ಣ ಮಹಾಬಲೇಶ್ವರ ಸ್ವಾಮಿ ದೇವಸ್ಥಾನವನ್ನು ಶ್ರೀ ರಾಮಚಂದ್ರಪುರ ಮಠಕ್ಕೆ ಸೇರಿದ ಕಾರಣ ಸರಕಾರವು ಶ್ರೀ ಮಠದ ಸ್ವಾಧೀನಕ್ಕೆ ನೀಡಿರುತ್ತದೆ. ಅಂದಿನಿಂದ ಇಂದಿನವರೆಗೂ ಉತ್ತಮ, ದಕ್ಷ, ಸ್ವಚ್ಛ ಆಡಳಿತ ಹಾಗೂ ಭಕ್ತರಿಗೆಪ್ರಸಾದ, ಭೋಜನ, ಅನ್ನದಾನ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ನೀಡಿದ ಶ್ರೀ ರಾಮಚಂದ್ರಪುರ ಮಠದ ಸುಪರ್ದಿಯಿಂದ ದೇವಳವನ್ನು ಸರಕಾರದ ವಶ ಪಡೆಯುವ ಯತ್ನವು ಕಾನೂನು ಬಾಹಿರವಾಗಿದೆ.ಈ ಪ್ರಯತ್ನವು ಅನಗತ್ಯವಾಗಿದ್ದು ಇದರಿಂದ ನಾಗರೀಕರಾದ ನಮಗೂ ಕರ್ನಾಟಕ ಸರಕಾರಕ್ಕೂ ಕಾನೂನು ಸಮರಕ್ಕೆ ದಾರಿಯಾಗುತ್ತದೆ ಅಲ್ಲದೇ ರಾಜ್ಯದ ಅಮೂಲ್ಯ ದ್ರವ್ಯ ಹಾನಿಗೀಡಾಗುತ್ತದೆ.
ಇದಲ್ಲದೇ ಶ್ರೀ ರಾಮಚಂದ್ರಪುರಮಠವನ್ನು ಸರಕಾರದ ಸ್ವಾದೀನಕ್ಕೆ ಪಡೆದು ಮಠದ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಉದ್ದೇಶವನ್ನು ನಿರ್ಧರಿಸಿದ್ದು ಇದು ಕಾನೂನು ಬಾಹಿರವಾಗಿದ್ದು ನಿಯಮಪಾಲಿಸಬೇಕಾದ ಸರಕಾರವು ತಪ್ಪು ನಡೆಯಲ್ಲಿ ಹೋದಂತಾಗಿದೆ ಮಾತ್ರವಲ್ಲದೇ ಈ ಯತ್ನವು ಭಾರತೀಯ ನಾಗರೀಕರ ಮೂಲಭೂತ ಹಕ್ಕಾದ ಧಾರ್ಮಿಕ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗುತ್ತದೆ. ಶ್ರೀ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಸರಕಾರದ ತಪ್ಪು ನಿರ್ಧಾರದಿಂದ ಆಗುವ ಕಷ್ಟ ನಷ್ಟಗಳಿಗೆ ಸರಕಾರವೇ ಜವಾಬ್ದಾರಿಯಾಗಿರುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದ್ದು ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ನೀಡುವಂತೆ ಒತ್ತಾಯಿಸಲಾಗಿದೆ.
ಕಂಪದ ಕೋಡಿ ಶಂಕರ ಭಟ್ಟ ಅಧ್ಯಕ್ಷರು,ಗುರಿಕ್ಕಾರರು ಮತ್ತು ಸದಸ್ಯರು ಹವ್ಯಕ ವಲಯ ಮಾಣಿ ಹಾಗೂ ಪ್ರಮುಖರಾದ ಸೊಂದಿ ಶಂಕರ ನಾರಾಯಣ ಭಟ್ಟ,ಶಿವಪ್ರಸಾದ ಕೈಂತಜೆ,ರಾಜಾರಾಮ ಕಾಡೂರು,ಪ್ರಭಾಕರ ಭಟ್ಟ ಕೈಂತಜೆ,ಅನುಪಮಾ ಟಿ.ಪಿ.,ಎಂ.ದೇವಕಿ ಬಿ.ಭಟ್ಟ,ವಸಂತಲಕ್ಷ್ಮಿ ಎಸ್.ಪ್ರಸಾದ್,ವಿಜಯಲಕ್ಷ್ಮಿ ಪಿ.ಭಟ್ಟ,ಕೃಷ್ಣ ಪ್ರಸಾದ್ ಸೊಂದಿ ಉಪಸ್ಥಿತರಿದ್ದರು.

