ಪೊಳಲಿ: “ಭಾಷೆ ಸಾಹಿತ್ಯ ಸಂಸ್ಕೃತಿಯ ಸುಸಂಸ್ಕೃತ ಬಳಕೆಯ ಸಮಗ್ರತೆಯ ಸಂಕೇತವೇ ಯಕ್ಷಗಾನ ಕಲೆಯ ಶ್ರೀಮಂತಿಕೆ”. ಸಾಧಕ ಕಲಾವಿದ ಅಗ್ರಗಣ್ಯರು ಈ ಎಲ್ಲಾ ರಂಗಗಳಿಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧಕ ಕಲಾವಿದರ ಸನ್ಮಾನ-ಭಾಷೆ-ಸಾಹಿತ್ಯ-ಕಲೆ- ಸಂಸ್ಕೃತಿಗೆ ಸಲ್ಲುವ ಗೌರವ ಎಂದು ಕಲಾವಿದ ರವಿ ಅಲೆವೂರಾಯ ಅವರು ಹೇಳಿದರು. ಅವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಯಕ್ಷಕಲಾ ಪೊಳಲಿ ಇವರ 21ನೇ ವರ್ಷದ ವರ್ಧಂತ್ಯುತ್ಸವದ ಅಂಗವಾಗಿ ಪೊಳಲಿ ರಾಜಾಂಗಣದಲ್ಲಿ ಜರಗಿದ ಯಕ್ಷಕಲೋತ್ಸವ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಭಾಷಣಾ ಗೈದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಕ್ಷಗಾನ ರಂಗದ ಕೊಡುಗೆ ಬಹಳ ಮಹತ್ವದ್ದು ಎಂದರು.


ಸನ್ಮಾನಿತರ ಪರವಾಗಿ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಅವರು ಮಾತನಾಡಿ, ಯಕ್ಷಗಾನದಲ್ಲಿ ಅನೇಕ ರೀತಿಯ ಬದಲಾವಣೆಗಳು ಬರುತ್ತಿದ್ದು ಅವು ಸಕರಾತ್ಮಕ ಬೆಳವಣಿಗೆಗೆ ಪೂರಕವಾಗಿದ್ದರೆ ಸ್ವಾಗತಾರ್ಹ. ಯಕ್ಷಗಾನದ ಮೂಲ ಚೌಕಟ್ಟಿಗೆ ಧಕ್ಕೆಯಾಗದಂತಿರಬೇಕು ಎಂಬ ಕಾಳಜಿ ಎಲ್ಲರಲ್ಲೂ ಇರಬೇಕು ಎಂದರು.
ಯಕ್ಷಗಾನ ಕ್ಷೇತ್ರದ ಸಾಧಕರುಗಳಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಉಜಿರೆ ಅಶೋಕ್ ಭಟ್, ಪುಂಡರೀಕ್ಷಾ ಉಪದ್ಯಾಯ, ದಯನಂದ ಶೆಟ್ಟಿ ಜೆಪ್ಪು, ಬೇತ ಕುಂಞ ಕುಲಾಲ್, ಚಿದಂಬರ ಬಾಬು ಕೋಣಂದೂರು, ಅಂಬಾಪ್ರಸಾದ್ ಪಾತಾಳ ಅವರುಗಳನ್ನು ಸನ್ಮಾನಿಸಲಾಯಿತು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಅರ್ಚಕ ನಾರಾಯಣ ಭಟ್ ಸನ್ಮಾನಿತರಿಗೆ ಶುಭ ಸಂಸನೆಗೈದರು. ವೇದಿಕೆಯಲ್ಲಿ ಪೊಳಲಿ ನಿತ್ಯಾನಂದ ಕಾರಂತ, ಉದ್ಯಮಿ ಭುವನೇಶ್ ಪಚಿನಡ್ಕ, ಯಕ್ಷಕಲಾ ಪೊಳಲಿ ಇದರ ಸಂಚಾಲಕ ವೆಂಕಟೇಶ್ ನಾವಡ, ಕೇಶವ್ ಪೊಳಲಿ, ಲೋಕೇಶ್ ಭರಣಿ, ತಾ.ಪಂ. ಸದಸ್ಯ ಯಶವಂತ ಕೋಟ್ಯಾನ್, ಅನಭ ಪೊಳಲಿ, ಸುಬ್ಬಾಯ ಕಾರಂತ, ಮೋಹನ್ ಬಿಳ್ವಪತ್ರೆ, ಜನಾರ್ಧನ್ ಅಮುಂಜೆ ಕಾರ್ಯಕ್ರಮ ನಿರೂಪಿಸಿದರು.




























