ಮೂಡುಬಿದಿರೆ: ಗಾಂಧಿಜಯಂತಿ ಅಂಗವಾಗಿ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಬೃಹತ್ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಕರಿಂಜೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಾದ ಉದಯ, ಚಂದ್ರಹಾಸ, ರವಿ.ಕೆ, ಶೋಭಾ, ಯಶೋದ, ಸುಂದರಿ, ಸುಮಿತ್ರ ಕೆ, ಸುಮಿತ್ರ ಎಂ, ಕಮಲ, ಸುನಂದ ಅವರನ್ನು ಸನ್ಮಾನಿಸಲಾಯಿತು.
ಎಕ್ಸಲೆಂಟ್ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರುತಕೀರ್ತಿರಾಜ್ ಜೈನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ನಮ್ಮ ಮನೆ ಎಂಬುದು ಒಂದು ದೇಶವಿದ್ದಂತೆ ಆದ್ದರಿಂದ ಮನೆಯನ್ನು ಪ್ರೀತಿಸಿದ ಹಾಗೆ ದೇಶವನ್ನು ಪ್ರೀತಿಸಬೇಕು. ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ದೇಶವನ್ನು ಸ್ವಚ್ಛವಾಗಿರಿಸಲು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು. ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದರೂ ಸ್ವಚ್ಛತೆಯಲ್ಲಿ ಕೆಳಮಟ್ಟದಲ್ಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಮ್ಮಿಕೊಂಡ ಸ್ವಚ್ಚಭಾರತ್ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರೂ ಪಾಲ್ಗೊಳ್ಳುವ ಮೂಲಕ ಅದನ್ನು ಯಶಸ್ಸುಗೊಳಿಸಬೇಕು. ಈ ಅಭಿಯಾನ ಒಂದು ದಿನಕ್ಕೆ ಸೀಮಿತವಾಗದೆ ಅದು ನಿತ್ಯದ ಕೆಲಸವಾಗಬೇಕು ಎಂದರು.
ಪುರಸಭೆಯ ಪರಿಸರ ಇಂಜಿನಿಯರ್ ಶಿಲ್ಪಾ ಮಾತನಾಡಿ. ಮೂಡುಬಿದಿರೆ ಪುರಸಭೆಯು ಬಯಲು ಶೌಚಮುಕ್ತಗೊಳಿಸಲು ಆದ್ಯತೆ ನೀಡುತ್ತಿದ್ದು ಶೌಚಾಲಯವಿಲ್ಲದವರು ಪುರಸಭೆಗೆ ಅರ್ಜಿ ಸಲ್ಲಿಸಬೇಕೆಂದು ಹೇಳಿದರು.
ಜಿ. ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ಪುರಸಭೆಯ ಆರೋಗ್ಯ ನಿರೀಕ್ಷಕಿ ಇಂದು, ಎಕ್ಸೆಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ರೋಟರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ ವೇದಿಕೆಯಲ್ಲಿದ್ದರು. ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್‍ನ ಅಧ್ಯಕ್ಷ ರಾಜೇಶ್ ಬಂಗೇರಾ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಕೆ. ವಂದಿಸಿದರು.
ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು, ಅಲಂಗಾರು, ಜ್ಯೋತಿನಗರ, ವಿದ್ಯಾಗಿರಿ, ಜೈನ್‍ಪೇಟೆ, ಪ್ರಾಂತ್ಯ, ಕೊಪ್ಪಳ, ಬೆಟ್ಕೇರಿ, ಕೈಕಂಬ ಕೋಟೆಬಾಗಿಲು, ಪ್ರದೇಶಗಳಿಂದ ಸ್ವರಾಜ್ಯ ಮೈದಾನದವರೆಗೆ ಮುಖ್ಯರಸ್ತೆ ಹಾಗೂ ಒಳರಸ್ತೆಗಳಲ್ಲಿ ಏಕಕಾಲದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ರೋಟರಿಕ್ಲಬ್‍ನ ಸದಸ್ಯರು ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸಕಡ್ಡಿ ಪೇಪರ್, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಪರಿಸರವನ್ನು ಶುದ್ಧೀಕರಿಸಿದರು. ಸಂಗ್ರಹಿಸಿದ ಕಸದ ಗೋಣಿಚೀಲಗಳನ್ನು ಪುರಸಭಾ ಸ್ವಚ್ಛತಾ ಸಿಬ್ಬಂಧಿಗಳು ಲಾರಿಗಳಲ್ಲಿ ತುಂಬಿ ಕರಿಂಜೆಯಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿಗೊಳಿಸಿದರು.

