ಮೂಡುಬಿದಿರೆ: ತ್ರಿಭುವನ್ ಅಟೊಮೋಟಿವ್ ಸ್ಪೋಟ್ರ್ಸ್ ಕ್ಲಬ್ ಮತ್ತು ಬೆದ್ರ ಅಡ್ವೆಂಚರ್ ಕ್ಲಬ್ ವತಿಯಿಂದ ಇಂಡಿಯನ್ ಮೋಟೊ ಸ್ಪೋಟ್ರ್ಸ್ ಕಂಪೆನಿ ಸಹಯೋಗದಲ್ಲಿ `ಬೆದ್ರ ಟಿಎಸ್‍ಡಿ ಕಾರು ರ್ಯಾಲಿ’ 2016 ಅಕ್ಟೋಬರ್ 2ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ ಎಂದು ಬೆದ್ರ ಅಡ್ವೆಂಚರ್ ಕ್ಲಬ್‍ನ ಅಧ್ಯಕ್ಷ ಅಕ್ಷಯ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದ್ಮಾವತಿ ಕಲಾ ಮಂದಿರದ ಆವರಣದಿಂದ ಬೆಳಿಗ್ಗೆ 9ಕ್ಕೆ ಆರಂಭವಾಗುವ ರಾಲಿ ಬೆಳುವಾಯಿ, ಶಿರ್ತಾಡಿ, ನಾರಾವಿ, ಹೊಸ್ಮಾರು ಇನ್ನಿತರ ಒಳಮಾರ್ಗಗಳಲ್ಲಿ ಚಲಿಸಿ ಮಹಾವೀರ ಕಾಲೇಜು ಬಳಿ ಅಂತ್ಯಗೊಳ್ಳಲಿದ್ದು ಸಂಚರಿಸುವ ಮಾರ್ಗದ ಒಟ್ಟು ವಿಸ್ತೀರ್ಣ 76 ಕಿಮೀ ಆಗಿರುತ್ತದೆ ಎಂದರು.
ಸಮಯ ಮತ್ತು ಅಂತರ ರಾಲಿಯಲ್ಲಿ ಪ್ರಾಮುಖ್ಯತೆ ಪಡೆಯಲಿದ್ದು ವೇಗದ ಮಿತಿ ಗಂಟೆಗೆ 40 ಕಿಮೀ ಒಳಗಿರುತ್ತದೆ. ಚಾಲಕನ ಚಾಲನಾ ಕೌಶಲ ತಂತ್ರಗಾರಿಕೆ ಕೂಡ ಸ್ಪರ್ಧೆಯಲ್ಲಿ ಪರಿಗಣನೆಗೆ ಬರಲಿದೆ. ವೋಡಾ ಮೀಟರ್ ಮತ್ತು ಮಾರ್ಗಸೂಚಿ ಆಧಾರದಲ್ಲಿ ಸ್ಪರ್ಧಾಳು ಮಾರ್ಗಗಳನ್ನು ಗುರುತಿಸಲಿದ್ದಾರೆ.
ಸ್ಪರ್ಧೆಯು ಸಾಮಾನ್ಯ ,ದಂಪತಿ, ವಿದ್ಯಾರ್ಥಿ ಮತ್ತು ಮಹಿಳೆಯರು ಎಂಬ ನಾಲ್ಕು ವಿಭಾಗಗಳಲ್ಲಿ ನಡೆಯಲಿದ್ದು ಮೂಡುಬಿದಿರೆ ವ್ಯಾಪ್ತಿಯವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಬೆದ್ರ ಅಡ್ವೆಂಚರ್ ಕ್ಲಬ್‍ನ ಸದಸ್ಯ ರಾಮಕೃಷ್ಣ ಉಪಸ್ಥಿತರಿದ್ದರು.

