ಬಂಟ್ಟಾಳ : ಕರ್ನಾಟಕ ಸರ್ಕಾರವು ಆಯವ್ಯಯದಲ್ಲಿ ಪ್ರಕಟಿಸಿದ ಅನುದಾನವನ್ನು ಇತರೇ ಯೋಜನೆಗಳಿಗೆ ಬಳಕೆ ಮಾಡದೆ ಆಯಾ ಯೋಜನೆಗಳಿಗೆ ನಿಗದಿತ ಅವಧಿಯಲ್ಲಿ ಅನುಷ್ಠಾನಕ್ಕೆ ತರಬೇಕು, ಅಂತೆಯೇ ಪರಿಶಿಷ್ಟರ ಶ್ರೇಯೋಭಿವೃದ್ದಿಗಾಗಿ ಜಾರಿಗೊಳಿಸಿರುವ ಕರ್ನಾಟಕ ಅನುಸೂಚಿತ-ಬುಡಕಟ್ಟುಗಳ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಕೇಂದ್ರ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಒತ್ತಾಯಿಸಿದ್ದಾರೆ.ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ‘ಅಂಬೇಡ್ಕರ್-ಸಾಮರಸ್ಯ-ರಾಷ್ಟ್ರೀಯತೆ’ ಎಂಬ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಬಳಿಕ ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಪ್ರದರ್ಶಿನಿಯ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಅಂಬೇಡ್ಕರ್ ಅವರು 125 ನೇ ವರ್ಷದ ಜನ್ಮದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ವರ್ಷಪೂರ್ತಿ 16 ಪ್ರಮುಖ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಇದಕ್ಕಾಗಿ ರಾಷ್ಟಮಟ್ಟದ ಸಮಿತಿಯೊಂದನ್ನು ರಚಿಸಲಾಗಿದ್ದು 125 ಕೋಟಿ ಅನುದಾನವನ್ನೂ ಕೂಡ ಒದಗಿಸಿದೆ ಎಂದ ಸಚಿವರು, ಪರಿಶಿಷ್ಟರ ಕಲ್ಯಾಣಕ್ಕಾಗಿ ಉಪಯೋಜನೆಯಡಿ 38,832 ಕೋಟಿ ರೂ ಅನುದಾನವನ್ನು ನೀಡಲಾಗಿದೆ.ನ.26 ರಂದು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸಿ, ವಿಶೇಷ ಸಂಸತ್ ಕಲಾಪವನ್ನು ನಡೆಸಲಾಗುತ್ತಿದೆ ಎಂದರು.ಧರ್ಮಕ್ಕಿಂತಲೂ ದೇಶ ದೊಡ್ಡದು ಎಂದವರು ಅಂಬೇಡ್ಕರ್. ಸಮಾಜದ ಕಳಕಳಿ ದೇಶದ ಪ್ರೇಮದ ಪ್ರತೀಕ. ಮನುಕುಲದ ಉದ್ಧಾರಕ್ಕೆ ಉದಾತ್ತ ಧ್ಯೇಯಕ್ಕಾಗಿ ಬದುಕಿದ ಮಹಾಪುರುಷ, ಸಾಮರಸ್ಯ –ರಾಷ್ಟ್ರೀಯತೆ ಅವರ ಜೀವನಾಡಿಯಾಗಿತ್ತು. ಇಡೀ ಬದುಕನ್ನು ಧಮನಿತರಿಗೆ, ಸಾಮಾಜಿಕವಾಗಿ , ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ, ಸಮಾನತೆ ಮತ್ತು ಸಾಮರಸ್ಯದ ನ್ಯಾಯ ದೊರಕಿಸಲಿಕ್ಕಾಗಿಯೇ ಮೀಸಲಿಟ್ಟ ಧೀಮಂತ ನಾಯಕ ಬಾಬಾ ಸಾಹೇಬ ಅಂಬೇಡ್ಕರ್ ಎಂದ ಸಚಿವರು, ಅಂಬೇಡ್ಕರ್ ಅವರು ಸ್ವಾರ್ಥಕ್ಕೆ ಒಗ್ಗಿಕೊಳ್ಳದೆ ಸಾಮಾಜಿಕ, ಸಾಮರಸ್ಯ ಮತ್ತು ರಾಷ್ಟ್ರೀಯತೆಯ ಸಮಗ್ರತೆಗೆ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿದ್ದಾರೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವಿಕ ಮಾತುಗಳನ್ನಾಡಿ, ಜಗತ್ತಿನಲ್ಲಿ ಸರ್ವಶ್ರೇಷ್ಠ ರಾಷ್ಟ ಭಾರತ. ಶಕ್ತಿಶಾಲಿಯಾದ ಸಂಪದ್ಭರಿತವಾದ ದೇಶವಿದು ಆದರೆ ದೇಶದೊಳಗಿನ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಮನೆಯಲ್ಲಿ ಬೆಕ್ಕು, ನಾಯಿಗಳಿಗೆ ಹಾಸಿಗೆ ಮಾಡುತ್ತೇವೆ. ಆದರೆ ನಮ್ಮದೇ ಜನಗಳನ್ನು ಅಸ್ಪೃಶ್ಯತೆಯ ಹೆಸರಿನಲ್ಲಿ ದೂರ ಇಡುತ್ತಿದ್ದೇವೆ. ನಮ್ಮದೇ ದೇಶವನ್ನು ಹೋರಾಟ ಮಾಡಿ ಉಳಿಸಿ ಬೆಳೆಸಿದವರು ನಮಗೆ ಬೇಡವಾಗಿದ್ದಾರೆ ಎಂದರು.ಈ ದೇಶ ಜಗತ್ತಿಗೆ ಶಾಂತಿಯ ಸಂದೇಶ ಕೊಡಬೇಕಾದರೆ, ನಾವು ಅಸ್ಪೃಶ್ಯತೆಯ, ಮತಾಂತರ ದಂತಹಾ ಗಂಭೀರ ಸಮಸ್ಯೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಒಟ್ಟಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಾಯಾಜಿ ವಹಿಸಿದ್ದರು. ವೇದಿಕೆಯಲ್ಲಿ ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಬಿ.ವಿ.ವಸಂತ ಕುಮಾರ್, ಮತ್ತು ದಕ್ಷಿಣ ಮಧ್ಯಕ್ಷೇತ್ರೀಯ ಸಂಯೊಜಕ ಪ್ರಜ್ಞಾಪ್ರವಾಹ ರಘುನಂದನ್ ಉಪಸ್ಥಿತರಿದ್ದರು. ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಸ್ವಾಗತಿಸಿದರು. ಉಪನ್ಯಾಸಕಿ ಸುನೀತಾ ವಂದಿಸಿ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಬೇಟಿಯಿತ್ತ ಸಚಿವರು ಮಂದಿರದ ಒಳಗಡೆ ಪ್ರವೇಶಿಸದಿದ್ದಾಗ ಯಾಕೆ ಎಂದು ಪ್ರಶ್ನಿಸಿದ ಇತರರಿಗೆ ತಮ್ಮ ಬದುಕಿನ ಜೀವನದಲ್ಲಿ ನಡೆದ ಬಾಲ್ಯ ಸಂಗತಿಗಳನ್ನು ಮುಂದಿಟ್ಟು ತಾನೊಬ್ಬ ಅಸ್ಪೃಶ್ಯ ತನ್ನಂತವರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲವೆಂದು ಭಾವಿಸಿದ್ದೆ ಅಂದಿನಿಂದ ಇಂದಿನವರೆಗೂ ದೇವಸ್ಥಾನದ ಒಳಗೆ ಪ್ರವೇಶಿಸಲಿಲ್ಲ ಆದರೆ ಕಲ್ಲಡ್ಕದ ಮಂದಿರಲ್ಲಿ ನನ್ನೊಬ್ಬನನ್ನು ಸಹಜ ವ್ಯಕ್ತಿಯಂತೆ ನೋಡಿಕೊಂಡದ್ದು ಅಮೂಲ್ಯ ಕ್ಷಣ. ಮಂದಿರದ ಗರ್ಭಗುಡಿಯೊಳಗೆ ಪ್ರವೇಶಿಸಲು ಹೇಳಿದ್ದು ಅಮೂಲ್ಯ ಕ್ಷಣ ಎಂದು ನೆನಪಿಸಿಕೊಂಡು ಭಾವುಕರಾದರು ಎಂದು ಸಚಿವರ ಮಾತುಗಳನ್ನು ಡಾ| ಭಟ್ ಪ್ರಸ್ತಾವನೆಯಲ್ಲಿ ಮುಂದಿಟ್ಟರು
*ಶ್ರೀರಾಮ ವಿದ್ಯಾಕೇಂದ್ರಕ್ಕೆ ಬಂದದ್ದು ಶಾಲೆಗೆ ಬಂದದ್ದು ಎಂದು ಅನಿಸಿಲ್ಲ. ಗುರುಕುಲ ವಾತಾವರಣದಲ್ಲಿ ಇದ್ದೇವೆ ಎಂದೆನಿಸಿತ್ತು. ಸಮಾಜದಲ್ಲಿ ಇರುವ ಶ್ರೀಮಂತರು ಹಣವಂತರು ಬುದ್ದಿವಂತರು ಸೇವೆಯ ಕಾರ್ಯದಲ್ಲಿ ಸೇರಿಕೊಂಡಲ್ಲಿ ಮಹತ್ ಕಾರ್ಯವಾಗಬಹುದು
– ರಮೇಶ್ ಜಿಗಜಿಣಗಿ
– ಕೇಂದ್ರ ಸಚಿವರು
