ಬಂಟ್ವಾಳ: ಯಾವುದೇ ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದಷ್ಟು, ಅದು ಆ ಸಮಾಜಕ್ಕೆ ಶಕ್ತಿ ತುಂಬಿದಂತೆ ಎಂದು ದ.ಕ.-ಉಡುಪಿ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ ಹೇಳಿದರು.ಅವರು ವಿಶ್ವಕರ್ಮ ಸಮಾಜ ಸೇವಾ ಸಂಘ ಜೋಡುಮಾರ್ಗ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆದ 23 ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಸಮಾಜದ ಸಾಧಕ ಗಣ್ಯರಿಗೆ ಗೌರವಾಭಿನಂದನೆ ನೆರವೇರಿಸಿ ಮಾತನಾಡಿದರು.
ಹಲವು ಸಮಾಜಮುಖೀ ಚಿಂತನೆಗಳ ಜೊತೆಗೆ ಕ್ರಿಯಾಶೀಲವಾಗಿರುವ ವಿಶ್ವಕರ್ಮ ಸಮಾಜ ಸಏವಾ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಘ 25 ವೇ ವರ್ಷದತ್ತ ಮುನ್ನಡೆಯುತ್ತಿದ್ದು, 25 ನೇ ವರ್ಷದ ವಿಶ್ವಕರ್ಮ ಪೂಜೆ ಸ್ವಂತ ಸಮುದಾಯಭವನದಲ್ಲಿ ನಡೆಯುವಂತಾಗಲಿ ಎಂದರು.ಸಂಘದ ಅಧ್ಯಕ್ಷರಾದ ಸುಧಾಕರ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆರ್ಯಸಭಾದ ಗೌರವಾಧ್ಯಕ್ಷ ಪಾಲ್ಕೆ ಧನಂಜಯ ಆಚಾರ್ಯರು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ವಿಶ್ವಕರ್ಮತನವನ್ನು ಉಳಿಸುವುದರ ಜೊತೆಗೆ ಇತರರಿಗೆ ಮಾದರಿಯಾದ ಜೀವನ ನಡೆಸಬೇಕು ಎಂದು ಕರೆ ನೀಡಿದರು. ವಿಶ್ವಕರ್ಮ ಸಂಘದ ನೂತನ ಸಭಾಭವನಕ್ಕೆ ಅಗತ್ಯ ನೆರವು ನೀಡುವ ಬಗ್ಗೆ ಅವರು ಈ ಸಂದರ್ಭ ಘೋಷಿಸಿದರು.
ವಿಶ್ವಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗೀತಾ ರಮೇಶ್ ಆಚಾರ್ಯ , ಧಾರ್ಮಿಕ ಕಾರ್ಯದರ್ಶಿ ಕಳ್ಳಿಗೆ ನಾರಾಯಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿಭಿನ್ನ ರಂಗಭೂಮಿಯಲ್ಲಿ ವಿಶಿಷ್ಟ ಸಾಧನೆ ಗೈದ ಚಿ.ರಮೇಶ್ ಕಲ್ಲಡ್ಕ ರವರನ್ನು ಸನ್ಮಾನಿಸಲಾಯಿತು. ಸಾಧಕ ಗಣ್ಯರಾದ ಕಳ್ಳಿಗೆ ನಾರಾಯಣ ಆಚಾರ್ಯ, ಪುರುಷೋತ್ತಮ ಆಚಾರ್ಯ ಮೇರಮಜಲು ಹಾಗೂ ಲಕ್ಷ್ಮೀ ಗೋಪಾಲ ಆಚಾರ್ಯ, ನಿತಿನ್ ಕಲ್ಲಡ್ಕ ರವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಅಪರಾಹ್ನದ ಬಳಿಕ ವಿಶ್ವಜ್ಯೋತಿ ಮಹಿಳಾ ಮಂಡಳಿಯ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಚಂದ್ರಶೇಖರ ಆಚಾರ್ಯ ಕಲ್ಲಡ್ಕ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.
ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ಪ್ರಸ್ತಾಪಿಸಿದರು. ಮಾಜಿ ಅಧ್ಯಕ್ಷ ಪ್ರಕಾಶ ಆಚಾರ್ಯ ತುಂಬೆ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಂದೀಪ್.ಬಿ ಆಚಾರ್ಯ ವಂದಿಸಿದರು. ಅಶೋಕ್ ಆಚಾರ್ಯ, ಜಯಚಂದ್ರ ಆಚಾರ್ಯ, ವಿದ್ಯಾರತ್ನಾಕರ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪತ್ರಕರ್ತ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.
