ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇವುಗಳ ವತಿಯಿಂದ ಆಯ್ದ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಜೂ.14ರಂದು ಮಿತ್ರ ಮಂಡಳಿ ಸಭಾಭವನದಲ್ಲಿ ಜರಗಿತು.
ಪುಂಜಾಲಕಟ್ಟೆ ಪೊಲೀಸ್ ಠಾಣಾಕಾರಿ ಲತೇಶ್ ಕುಮಾರ್ ಡಿ.ಕೆ.ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಡ್ಡಾಯ ಶಿಕ್ಷಣ ನೀತಿಯಿಂದ ಸಾಕ್ಷರತೆ ಜಾಸ್ತಿಯಾಗಿದ್ದು, ಮಕ್ಕಳ ಶಿಕ್ಷಣದ ಹಕ್ಕನ್ನು ಪೂರೈಸಲು ಪೋಷಕರು ಸಹಕರಿಸಬೇಕು. ಅಪರಾಧ,ಶೋಷಣೆ ಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು.ವಿದ್ಯಾದಾನಕ್ಕೆ ಸಹಕರಿಸುವ ನಾಗರಿಕರು,ಸಂಘ ಸಂಸ್ಥೆಗಳು ಅಭಿನಂದನೀಯರು ಎಂದು ಹೇಳಿದರು.

ಪಿಲಾತಬೆಟ್ಟು ನಯನಾಡು ಚರ್ಚ್ಪಾ ಪಾಲನಾ ಮಂಡಳಿ ಮಾಜಿ ಅಧ್ಯಕ್ಷ ಸಿಲ್ವೆಸ್ಟರ್ ಪಿಂಟೋ ಅವರು ಅತಿಥಿಯಾಗಿ ಮಾತನಾಡಿ ಬಡತನದಿಂದ ಯಾರೂ ಶಿಕ್ಷಣ ವಂಚಿತರಾಗಬಾರದು. ಬಡವರ ಸೇವೆ ಮಾಡುವುದು ಭಗವಂತನ ಸೇವೆಯಾಗಿದೆ. ಇತರರಿಗೆ ಸಹಾಯ ಮಾಡಲು ಶ್ರೀಮಂತರೇ ಆಗಬೇಕೆಂದಿಲ್ಲ. ಸೇವೆಯಿಂದ ಜೀವನ ಸಾರ್ಥಕವಾಗುವುದು ಎಂದರು.ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ನಿರ್ದೇಶಕ ಉಮೇಶ್ ತಿಮರಡ್ಡ ,ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ.ಸಾಮಾಜಿಕ ಕಾರ್ಯಕರ್ತ ಸೆಲೆಸ್ತಿನ್ ಡಿ ಸೋಜ, ಮಿತ್ರಮಂಡಳಿ ಅಧ್ಯಕ್ಷ ವಿಕ್ಟರ್ ಡಿ ಸೋಜ , ವನಿತಾ ಸಮಾಜದ ಅಧ್ಯಕ್ಷೆ ಉಮಾ ಡಿ.ಗೌಡ ಪದಾಕಾರಿಗಳಾದ ಮಂಜಪ್ಪ ಮೂಲ್ಯ,ಹರೀಶ್ಚಂದ್ರ ಶೆಟ್ಟಿಗಾರ್,ಕಾಂತಪ್ಪ ಟೈಲರ್,ಮೋಹನ ಎಚ್.,ಯಶೋಧರ ಶೆಟ್ಟಿ ,ಸಂತೋಷ್ ಕುಮಾರ್ ಮೂರ್ಜೆ , ಬೇಬಿ ಮಂಜಪ್ಪ ಮೂಲ್ಯ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕಗಳಿಸಿದ ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು|ಶ್ರೇಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಿತ್ರ ಮಂಡಳಿ ಅಧ್ಯಕ್ಷ ರಮೇಶ್ ಮೂಲ್ಯ ಅವರು ಸ್ವಾಗತಿಸಿದರು.ಕಾರ್ಯದರ್ಶಿ ರಾಜೇಶ್ ಪುಳಿಮಜಲು ವಂದಿಸಿದರು. ಭರತ್ ಕುಮಾರ್ ಜೈನ್ ನಿರೂಪಿಸಿದರು.
