ಬಂಟ್ವಾಳ: ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂದಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಸೆ. 3ರಂದು ಬಿ.ಸಿ.ರೋಡಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ತಿಳಿಸಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯುವ ಈ ಉಪವಾಸ ಸತ್ಯಗ್ರಹದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಸುನೀಲ್ ಕುಮಾರ್, ಎಸ್.ಅಂಗಾರ, ವಿ.ಪ. ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ, ಗಣೇಶ್ ಕಾರ್ಣಿಕ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಸಚಿವ ನಾಗರಾಜ ಶೆಟ್ಟಿ, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸೇರಿದಂತೆ ಪಕ್ಷದ ಜಿಲ್ಲಾ ನಾಯಕರು, ಕಾರ್ಯಕರ್ತರು, ನಾಗರಿಕರು ಭಾಗವಹಿಸಲಿದ್ದಾರೆ ಎಂದರು.

ಗ್ರಾಮೀಣ ಭಾಗದಲ್ಲಿ ಪರಿವರ್ತಿತ ಜಮೀನು ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೊಂದಾಯಿಸಿ ಇ-ಸ್ವತ್ತು ತಂತ್ರಂಶಾದಲ್ಲಿ ದಾಖಲಿಸಿ ಜಾರಿಯಲ್ಲಿತ್ತು. ಕಳೆದ ಮಾರ್ಚ್‍ನಲ್ಲಿ ನಡೆದ ಜಿಪಂ, ತಾಪಂ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ಸರಕಾರ ದ.ಕ., ಉ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ 9/11ನನ್ನು ಇ-ಸ್ವತ್ತಿನಿಂದ ವಿಮುಕ್ತಗೊಳಿಸಿ ಪಿಡಿಒ ಅವರ ಕೈಬರಹದಿಂದಲೇ ಬರೆದುಕೊಟ್ಟರೂ ಅದನ್ನು ಮಾನ್ಯ ಮಾಡಬೇಕೆಂದು ಆದೇಶಿಸಿತು. ನಂತರ ಈ ಆದೇಶಕ್ಕೆ ಸ್ಪಷ್ಟನೆ ನೀಡಿದ ಆರ್.ಡಿ.ಪಿ.ಆರ್. ಸಚಿವಾಲಯ ಇ-ಸ್ವತ್ತಿನ ಮೂಲಕವೇ 9/11ನ್ನು ಕೊಡಬೇಕೆಂದು ತಿಳಿಸಿದೆ ಎಂದರು.
ಮಾರ್ಚ್ ತಿಂಗಳಲ್ಲಿ ಮಾಡಿರುವ ಈ ತಾತ್ಕಾಲಿಕ ವಿನಾಯಿತಿ ನೀಡಿದ ಸಂದರ್ಭದಲ್ಲಿ ಉಪ ನೊಂದಾಣಿ ಕಚೇರಿಯಲ್ಲಿ ಕಾವೇರಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತಿನ ನಡುವೆ ಇದ್ದ ಸಂಪರ್ಕವನ್ನು ಬೆಂಗಳೂರಿನಲ್ಲೇ ತಾಂತ್ರಿಕ ವಿಭಾಗದಲ್ಲಿ ತೆಗೆದು ಹಾಕಲಾಗಿದ್ದು. ಈವರೆಗೂ ಸಂಪರ್ಕ ನೀಡಿರುವುದಿಲ್ಲ. ಇದರಿಂದಾಗಿ ಗ್ರಾಮೀಣ ಮಟ್ಟದಲ್ಲಿ ಭೂಮಿ ವಿಕ್ರಯಿಸಿದರೆ ನೊಂದಾಣಿ ಕಚೇರಿಯಲ್ಲಿ ನೊಂದಾವಣೆಯಾದರೂ ಇ-ಸ್ವತ್ತಿಗೆ ಸಂಪರ್ಕವಿಲ್ಲದ ಕಾರಣ ಪಂಚಾಯತ್ ಮಟ್ಟದಲ್ಲಿ ಖಾತೆ ಬದಲಾವಣೆ ಯಾಗದಿರುವುದುರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.
ಬಂಟ್ವಾಳ ತಾಲೂಕು ಒಂದರಲ್ಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಖಾತೆ ಬದಲಾವಣೆಯಾಗದ ಕಡತಗಳು ಪಂಚಾಯತ್ ಮಟ್ಟದಲ್ಲಿದೆ. ಹಾಗೆಯೇ ಜಿಲ್ಲೆಯಲ್ಲಿ 50,000 ಕ್ಕೂ ಮಿಕ್ಕಿ ಕಡತಗಳು ಖಾತೆ ಬದಲಾವಣೆಯಾಗದೆ ಉಳಿದಿದೆ. ಸರಕಾರದ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೊಳಗಾಗಿದ್ದು ಸರಕಾರ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
94ಸಿ ಬಗ್ಗೆಯೂ ಗೊಂದಲ: 94ಸಿ ಯೋಜನೆಯಡಿಯಲ್ಲೂ ಗೊಂದಲವಿದ್ದು ಬಂಟ್ವಾಳ ತಾಲೂಕಿನಲ್ಲೂ ಹಕ್ಕು ಪತ್ರ ವಿತರಣೆಯಲ್ಲಿ ರಾಜಕೀಯ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು, ಈ ಬಗ್ಗೆ ಮಾಹಿತಿ ಹಕ್ಕಿನಡಿಯಡಿಯಲ್ಲಿ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ. ಸಂಪೂರ್ಣ ಮಾಹಿತಿ ದೊರೆತ ತಕ್ಷಣ ಬಿಜೆಪಿ ಇದರ ವಿರುದ್ಧವೂ ಉಗ್ರ ಹೋರಾಟವು ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಕಲಿ ಕಾಂಗ್ರೆಸ್: ಮಾಜಿ ಸಂಸದೆ ರಮ್ಯಾ ಅವರು, ಬಿಜೆಪಿ ಹಾಗೂ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಅವರು ರಮ್ಯಾಗೆ ಸ್ವಾತಂತ್ರ್ಯದ ಬಗ್ಗೆ ಜ್ಞಾನವೇ ಇಲ್ಲ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸಿಗರು ಈಗಿಲ. ಈಗಿನ ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರಿಲ್ಲ. ಎಲ್ಲರೂ ನಕಲಿ ಕಾಂಗ್ರೆಸಿಗರೇ ಎಂದು ಲೇವಡಿ ಮಾಡಿದರು.
ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ದಿನೇಶ್ ಭಂಡಾರಿ, ವಜ್ರನಾಥ ಕಲ್ಲಡ್ಕ, ರಮಾನಾಥ ರಾಯಿ, ಸೀತಾರಾಮ ಶೆಟ್ಟಿ, ಸದಾನಂದ ಮಲ್ಲಿ ಮೊದಲಾದವರಿದ್ದರು.
