ಮೂಡುಬಿದಿರೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮೂಡುಬಿದಿರೆ ಹಾಗೂ ಎಸ್.ಎಂ.ಪಿ ಪ್ರೌಢಶಾಲೆ ಬೆಳುವಾಯಿ ಇವುಗಳ ಜಂಟಿ ಆಶ್ರಯದಲ್ಲಿ ಕೆಸರುಗದ್ದೆ ಎಸ್.ಎಂ.ಪಿ ಪ್ರೌಢಶಾಲೆಯ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಫುಟ್‍ಬಾಲ್ ಪಂದ್ಯಾಟವು ಶುಕ್ರವಾರ ಆರಂಭಗೊಂಡಿತು.

ವಲಯದ ಪ್ರೌಢಶಾಲಾ ವಿಭಾಗದ 13 ಮತ್ತು ಬಾಲಕಿಯರ ವಿಭಾಗದ 6 ತಂಡಗಳು ಮೊದಲ ದಿನ ಪಂದ್ಯಾಟದಲ್ಲಿ ಭಾಗವಹಿಸಿದ್ದು ಬಾಲಕರ ವಿಭಾಗದಲ್ಲಿ ಡಿ.ಜೆ ಆಂಗ್ಲ ಮಾಧ್ಯಮದ ಶಾಲೆ ಮತ್ತು ಮಿಜಾರು ಶಾಲೆಯ ತಂಡದ ಮಧ್ಯೆ ಹಾಗೂ ಬಾಲಕಿಯರ ವಿಭಾಗದಲ್ಲಿ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಮತ್ತು ಜೈನ ಪ್ರೌಢಶಾಲೆ ಮಧ್ಯೆ ಮೊದಲ ಪಂದ್ಯಾಟದೊಂದಿಗೆ ಶುಭಾರಂಭಗೊಂಡಿತು.
ಶಾಲೆಯ ಸ್ಥಾಪಕರಲ್ಲಿ ಪ್ರಮುಖರಾಗಿರುವ ಜೆ.ಎಂ.ಪಡುಬಿದ್ರೆ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಸಂಚಾಲಕ ವಿನಯಕುಮಾರ್ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ದೈ.ಶಿ. ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ದೈ.ಶಿ.ಶಿ.ಸಂಘದ ಅಧ್ಯಕ್ಷ ನವೀನ್ ಅಂಬೂರಿ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ತೀರ್ಪುಗಾರ ಸುರೇಶ್ ಶೆಟ್ಟಿ, ಭಾರತ್ ಅಟೋ ಕಾರ್ಸ್‍ನ ಡೆನ್ನಿಸ್ ಬಂಜಾವೀಲ್ಸ್, ಉದ್ಯಮಿ ಜಾನ್ ಡಿ’ಸೋಜಾ ಮತ್ತು ಡಿ.ಎಲ್ ಇಸ್ಪ್ರಾ ಪ್ರವೀಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಸದಾಶಿವ ಶೆಟ್ಟಿ ಸ್ವಾಗತಿಸಿದರು. ದೇವದಾಸ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ರಾವ್ ವಂದಿಸಿದರು.


