ಮೂಡುಬಿದಿರೆ: ಕೋಟೆಬಾಗಿಲಿನ ಶ್ರೀ ವೀರಮಾರುತಿ ದೇವಸ್ಥಾನದ ಹೂವಿನ ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಿತು.
ಕುದ್ರೆಬೆಟ್ಟು ಸುಬ್ರಹ್ಮಣ್ಯ ತಂತ್ರಿಯವರ ನೇತ್ರತ್ವದಲ್ಲಿ ಮಧ್ಯಾಹ್ನ ಕ್ಷೇತ್ರದಲ್ಲಿ ಸಾಮೂಹಿಕ ಹೂವಿನ ಪೂಜೆ, ನಂತರ ಕ್ಷೇತ್ರದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಮಧ್ಯಾಹ್ನದ ಮಹಾಪೂಜೆಯನ್ನು ನಡೆಸಿಕೊಟ್ಟರು. ಸಂಜೆ ಮಹಾರಂಗ ಪೂಜಾದೀಪಾರಾಧನೆ ನಡೆಯಿತು.

ವಿದ್ಯಾರ್ಥಿವೇತನ ವಿತರಣೆ: ಇದೇ ಸಂದರ್ಭ ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ವತಿಯಿಂದ ಹೆಗ್ಗಡೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು ರೂ 1.75 ಲಕ್ಷ ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಈ ಬಗ್ಗೆ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಪ್ರತಿನಿಧಿ ಶಶಿಧರ ಹೆಗ್ಡೆ ಮಾತನಾಡಿ ವೈದ್ಯ ಅಥವಾ ಎಂಜಿನಿಯರ್ನಂತಹ ಉನ್ನತ ಹುದ್ದೆಗಳನ್ನು ಪಡೆದ ಮಾತ್ರಕ್ಕೆ ಬದುಕು ಪರಿಪೂರ್ಣವಾಗುವುದಿಲ್ಲ. ವಿದ್ಯೆಯು ವಿನಯ, ವಿವೇಕವನ್ನು ಕಲಿಸಿಕೊಡಬೇಕು. ಸರಿ, ತಪ್ಪುಗಳನ್ನು ನಿರ್ಧರಿಸುವ ಗುಣ ವಿದ್ಯೆಯಿಂದ ಬರಬೇಕು ಎಂದರು. ದಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಮುಂಬಯಿ ಹೆಗ್ಗಡೆ ಸೇವಾ ಸಂಘದ ಗೌರವ ಅಧ್ಯಕ್ಷ ಸಂಜೀವ ಪಿ. ಹೆಗ್ಡೆ, ಅಧ್ಯಕ್ಷ ವಿಜಯ್ ಕುಮಾರ್ ಹೆಗ್ಡೆ, ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ಯಾಮ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಸಂಘ ಮೂಡುಬಿದಿರೆ ವಲಯದ ಕಾರ್ಯದರ್ಶಿ ಅಪರ್ಣಾ ಪ್ರಸನ್ನ ಹೆಗ್ಡೆ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ವಿವರ ನೀಡಿದರು.
