ಬಂಟ್ವಾಳ:ದ.ಕ.ಜಿಲ್ಲೆಯಲ್ಲಿ ಅನುಪಾತಕ್ಕನುಗುಣವಾಗಿ ಪೋಲೀಸ್ ಸಿಬಂದಿಗಳ ನೇಮಕವಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು.ಪೊಲೀಸ್ ಇಲಾಖೆ ದುರ್ಬಲ ವರ್ಗದ ಜನರ ಪರವಾಗಿ ಕಾರ್ಯ ನಿರ್ವಹಿಸಬೇಕಲ್ಲದೆ ಜನರ ಮಾನ,ಪ್ರಾಣ ರಕ್ಷಣೆಯ ಹೊಣೆಗಾರಿಕೆ ಕೂಡಾ ಪೋಲೀಸರದ್ದಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ತಾಲೂಕಿನ ಗ್ರಾಮೀಣ ಭಾಗವಾದ ಸಿದ್ಧಕಟ್ಟೆಯಲ್ಲಿ ಸೋಮವಾರ ನೂತನ ಪೋಲೀಸ್ ಉಪಠಾಣೆಯ ಲೋಕಾರ್ಪಣೆಗೈದು ಮಾತನಾಡಿದ ಸಚಿವರು ಇತ್ತೀಚಿನ ದಿನಗಳಲ್ಲಿ ಅನಗತ್ಯ ವಿಚಾರಗಳಿಗೆ ಪೋಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವಂತಹ ಪ್ರವೃತ್ತಿ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಪೋಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು.ಕಾನೂನು ಬಾಹಿರ ಚಟುವಟಿಕೆಗಳು ಗಮನಕ್ಕೆ ಬಂದಾಗ ತತ್‍ಕ್ಷಣ ಜನಸಾಮಾನ್ಯರು ಪೋಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು.ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬಂಟ್ವಾಳ ತಾಲೂಕಿನಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಜೊತೆಗೆ ಇತ್ತೀಚೆಗಷ್ಟೆ ಟ್ರಾಫಿಕ್ ಪೋಲೀಸ್ ಠಾಣೆಯನ್ನು ತೆರೆಯಲಾಗಿದೆ.ಹಾಗೆಯೇ ಬಂಟ್ವಾಳದಲ್ಲಿ ಪೋಲೀಸ್ ಉಪವಿಭಾಗವನ್ನು ಆರಂಭಿಸಲಾಗಿದೆ ಎಂದ ಸಚಿವರು ಸಿದ್ದಕಟ್ಟೆಯಲ್ಲಿ ಐದು ಗ್ರಾಮಗಳಿಗೆ ಸೀಮಿತವಾಗಿ ಆರಂಭವಾಗಿರುವ ಉಪಠಾಣೆಗೆ ಅಕ್ಕಪಕ್ಕದ ಕುಕ್ಕಿಪಾಡಿ ಮತ್ತು ಎಲಿಯ ನಡುಗೋಡು ಗ್ರಾಮಗಳನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಎಂದರು.
ಕರ್ನಾಟಕ ವಿಧಾನ ಪರಿಷತ್‍ನ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಮಾತನಾಡಿ ಪೋಲೀಸರು ಯಾವುದೇ ತಪ್ಪು ಮಾಡಿದಾಗ ಅದರ ಪರಿಣಾಮ ನೇರವಾಗಿ ಸರಕಾರದ ಮೇಲಾಗುತ್ತದೆ.ಪೋಲೀಸರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬದ್ಧವಾಗಿದ್ದು ಈಗಾಗಲೆ ಸಿಬಂದಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. 20 ಸಾವಿರ ಸಿಬಂದಿಗಳನ್ನು ನೇಮಕಗೊಳಿಸುವ ಐತಿಹಾಸಿಕ ತೀರ್ಮಾನವನ್ನು ಗೃಹ ಸಚಿವರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಪೋಲೀಸ್ ಮಹಾ ನಿರೀಕ್ಷಕ ಜೆ.ಅರುಣ್ ಚಕ್ರವರ್ತಿ ಅವರು ಮಾತನಾಡಿ ಈ ಹಿಂದೆ ಜಾರಿಯಲ್ಲಿದ್ದ ಪೋಲೀಸ್ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.ಪೋ ಲೀಸ್ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿ ರೂಪಿಸುವ ಮೂಲಕ ಪೋಲೀಸರ ಇಮೇಜ್ ಹೆಚ್ಚಿಸಲು ಕ್ರಮ ಗೈಗೊಳ್ಳಲಾಗಿದೆ ಎಂದರು.
ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಬಂಟ್ವಾಳ ತಾ.ಪಂ.ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯರಾದ ಪ್ರಭಾಕರ ಪ್ರಭು,ಮಂಜುಳಾ ಸದಾನಂದ, ಬೂಡ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್,ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್,ಜಿಲ್ಲಾ„ಕಾರಿ ಡಾ|ಕೆ.ಜಿ.ಜಗದೀಶ,ಅಪರಜಿಲ್ಲಾಧಿಕಾರಿಕುಮಾರ್,ತಹಶೀಲ್ದಾರ್ ಪುರಂದರ ಹೆಗ್ಡೆ,ಡಿವೈಎಸ್‍ಪಿ ರವೀಶ್,ಸಿಐ ಬಿ.ಕೆ.ಮಂಜಯ್ಯ,ಎಸ್‍ಐ ರಕ್ಷಿತ್‍ಮತ್ತಿತರರಿದ್ದರು.
ಇದೇ ವೇಳೆ ಕುಕ್ಕಿಪಾಡಿ ಗ್ರಾ.ಪಂ|ಅಧ್ಯಕ್ಷ ದಿನೇಶ್ ಶಾಂತಿ ಅವರು ಕುಕ್ಕಿಪಾಡಿ ಮತ್ತು ಎಲಿಯನಡುಗೋಡು ಗ್ರಾಮವನ್ನು ಸಿದ್ದಕಟ್ಟೆ ಉಪ ಠಾಣಾ ವ್ಯಾಪ್ತಿಗೆ ಸೇರಿಸುವಂತೆ ಐಜಿಪಿ ಅವರಿಗೆ ಮನವಿ ಸಲ್ಲಿಸಿದರು.
ಹೆಚ್ಚುವರಿ ಪೋಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಅವರು ಸ್ವಾಗತಿಸಿ ಪ್ರಸ್ತಾವಿಸಿದರು.ಪೋಲೀಸ್ ಅರಕ್ಷಕ ಭೂಷಣ್ ಗುಲಾಬರಾವ್ ಬೊರಸೆ ವಂದಿಸಿದರು.ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.ಸಿದ್ದಕಟ್ಟೆಯಲ್ಲಿ ಪೊಲೀಸ್ ಉಪಠಾಣೆಯನ್ನು ತೆರಯ ಬೇಕೆಂಬ ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಈಡೇರಿದೆ.



