ಬಂಟ್ವಾಳ: ಸಂಚಾರಕ್ಕೆ ಆಯೋಗ್ಯವಾದ ಹದಗೆಟ್ಟ ಅಲ್ಲಿಪಾದೆ ರಸ್ತೆಯನ್ನು ದುರಸ್ತಿ ಮಾಡಿಕೊಡದಿದ್ದರೆ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು ಸ್ಥಳಿಯ ಗ್ರಾ.ಪಂ.ಗೆ ಕಾವಳ ಪಡೂರು ಗ್ರಾಮದ ಗ್ರಾಮಸ್ಥರು ನೀಡಿದ್ದಾರೆ. ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಳಪಡೂರು ಮತ್ತು ದೇವಸ್ಯ ಪಡೂರು ಗ್ರಾಮದ ನಾವೂರು ಮತ್ತು ಅಲ್ಲಿಪಾದೆ-ಪೆರಿಯಾರ್-ದೋಟ-ವಗ್ಗ ಸಂಪರ್ಕದ ರಸ್ತೆಯನ್ನು ರಿಪೇರಿ ಮಾಡಿ ಕೊಡುವಂತೆ ಹಲವು ಬಾರಿ ಇಲ್ಲಿನ ಗ್ರಾಮಸ್ಥರು ಸಂಬಂದಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿತ್ತು. ಆದರೆ ಸಮಾರು 15 ವರ್ಷಗಳಿಂದ ಡಾಮಾರು ಕಾಣದೆ ಜಲ್ಲಿ ಕಲ್ಲು ಎದ್ದು ಹೋಗಿರುವ ಹೊಂಡಗುಂಡಿಗಳಿಂದ ಕೂಡಿದ ಈ ಪ್ರಮುಖ ರಸ್ತೆಯನ್ನು ರಿಪೇರಿ ಮಾಡುವ ಬಗ್ಗೆ ಆಸಕ್ತಿವಹಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆ ಈ ರಿತಿಯಲ್ಲಿ ತೀರಾ ಹದಗೆಡಲು ಪ್ರಮುಖ ಕಾರಣ ಈ ಭಾಗದಲ್ಲಿ ನಡೆಯುತ್ತಿರುವ ಆಕ್ರಮ ಜಲ್ಲಿ ಕಲ್ಲಿನ ಕೋರೆ ಮತ್ತು ಸಿಮೆಂಟ್ ಪ್ಯಾಕ್ಟರಿಗೆ ಹೋಗುವ ಘನ ವಾಹನಗಳು. ಕಿರಿದಾದ ಗ್ರಾ.ಪಂ.ಗೆ ಸಂಬಂದಪಟ್ಟ ರಸ್ತೆಯಲ್ಲಿ ಅಧಿಕ ಭಾರವನ್ನು ಹಾಕಿಕೊಂಡು ಸಂಚರಿಸುವ ವಾಹನಗಳಿಂದಾಗಗಿ ರಸ್ತೆಗಳು ಹಾಳಾಗಿವೆ ಎಂದು ತಹಶೀಲ್ದಾರರಿಗೆ ಮನವಿ ನೀಡಿ ಕೋರೆಯನ್ನು ನಿಲ್ಲಿಸುವಂತೆಯೂ ಕೇಳಿಕೊಳ್ಳಲಾಗಿತ್ತು. ಆದಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಈ ಭಾಗದಲ್ಲಿ ಮೋರ್ರಾಜಿ ದೇಸಾಯಿ ಶಾಲೆ ಮತ್ತು ಕೇದಿಗೆ ಸರಕಾರಿ ಶಾಲೆಯಿದ್ದು ಮಕ್ಕಳಿಗೂ ಶಾಲೆಗೆ ತೆರಳಲು ತುಂಬಾ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ರಿಕ್ಷಾಗಳ ಸಹಿತ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲಿನ ಗ್ರಾಮಸ್ತರು ಸೇರಿ ಈ ರಸ್ತೆಯನ್ನು ರಿಪೇರಿ ಮಾಡಿಕೊಡದಿದ್ದರೆ ಉಗ್ರವಾದ ಹೋರಾಟವನ್ನು ಮಾಡಲು ಮುಂದಾಗಿದ್ದಾರೆ. ಜನರು ಹೋರಾಟ ದಾರಿಯನ್ನು ಹಿಡಿಯುವ ಮೊದಲು ರಸ್ತೆಯ ರಿಪೇರಿಯನ್ನು ಸ್ಥಳೀಯ ಆಡಳಿತ ಮಾಡುತ್ತದೆಯೋ ಕಾದು ನೋಡಬೇಕಾಗಿದೆ.



