ಮುಂಬಯಿ: ಭಂಡಾರಿ ಸಮಾಜದ ಯುವ ನಾಯಕ, ಸರಳ ಸಜ್ಜನಿಕಾ ಮನೋಭಾವದ ಯುವೋದ್ಯಮಿ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಅವರು ಸ್ವರ್ಣ ಪದಕದೊಂದಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್’ ಚ್ಯಾಂಪಿಯನ್ ಎಂದೆಣಿಸಿದ್ದಾರೆ. ಕಳೆದ ಭಾನುವಾರ ಘಾಟ್ಕೋಪರ್ ಪಶ್ಚಿಮದಲ್ಲಿನ ಪ್ರೆಸಿಡೆನ್ಶಿಯಲ್ ಟವರ್‍ನ ಕ್ರೀಡಾ ಸಂಕುಲದಲ್ಲಿ ನಡೆದ 6ನೇ ಡ್ಯಾನ್ ಬ್ಲ್ಯಾಕ್ ಬೆಲ್ಟ್ ಕರಾಟೆ ಚ್ಯಾಂಪಿಯನ್‍ಶಿಪ್ (Sixth Dan Black Belt Karate Championship) ನಲ್ಲಿ ಸೌರಭ್ ಭಂಡಾರಿ ವಿಜೇತರೆಣಿಸಿದರು. ಸಿಂಗಾಪುರ, ಕೆನಡಾ, ಆಸ್ಟ್ರೇಲಿಯಾ, ದುಬಾಯಿ, ಹಾಂಕ್‍ಕಾಂಗ್, ಮಲೇಷಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸ್ಪರ್ಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 19 ಉದಾತ್ತ ಚ್ಯಾಂಪಿಯನ್‍ಶಿಪ್‍ಗಳೊಂದಿಗೆ ಭಾರತ ರಾಷ್ಟ್ರದ ಅಗ್ರಗಣ್ಯ ಮೊದಲ ಸ್ಥಾನದಲ್ಲಿನ ಏಕೈಕ ಕರಾಟೆ ಪಟು ವಸಂತ್ ಟಿ.ಶೆಟ್ಟಿ ಬಜ್ಪೆ ಮಂಗಳೂರು ಹಾಗೂ ರಾಷ್ಟ್ರದ ದ್ವಿತೀಯ ಸ್ಥಾನದಲ್ಲಿನ ಕರಾಟೆ ಪರಿಣತ ವಿಜಯ್ ಪೂಜಾರಿ ಕೋಟ ಅವರಿಂದ ತರಬೇತಿ ಪಡೆದಿರುತ್ತಾರೆ.
ಸುಮಾರು 16ವರ್ಷಗಳಿಂದ ಕರಾಟೆಯನ್ನು ಅಭ್ಯಾಸಿಸಿ ಆಸ್ಟ್ರೇಲಿಯಾ, ದುಬಾಯಿ, ಮಲೇಷಿಯಾ ಇತ್ಯಾದಿ ಹಲವು ರಾಷ್ಟ್ರಗಳಲ್ಲಿ ಭಾರತೀಯ ಪ್ರತಿನಿಧಿಯಾಗಿಸಿ ಸ್ಪರ್ಧಿಸಿ ಇದೀಗಲೇ 14 ಚಿನ್ನದ ಪದಕ, 25 ಬೆಳ್ಳಿ 28 ಕಂಚುಗಳ ಪದಕ ತನ್ನದಾಗಿಸಿರುವ ಸೌರಭ್ ಓರ್ವ ಅಪ್ರತಿಮ ಕಲಾವಿದನಾಗಿದ್ದಾರೆ.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷರಾಗಿ, ಮನಿಫೋಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಶೋಭಾ ಎಸ್.ಭಂಡಾರಿ ದಂಪತಿ ಸುಪುತ್ರನಾಗಿರುವ ಇವರು ಎಸ್.ಬಿ ರಿಯಾಲಿಟಿ ನಿರ್ದೇಶಕರಾಗಿ, ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸದಸ್ಯರಾಗಿರುವರು. ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ 2016-2018ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇದೇ ಮೊದಲ ಬಾರಿಗೆ ಸಮುದಾಯದ ಸೇವೆಗೂ ತಮ್ಮನ್ನು ತೊಡಗಿಸಿ ಕೊಂಡಿರುವರು.
ಚಿತ್ರ ಮಾಹಿತಿ : ರೋನ್ಸ್ ಬಂಟ್ವಾಳ್






