ಬಂಟ್ವಾಳ : ಕಳೆದ ಸೋಮವಾರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ವಲಯ ಅರಣ್ಯ ಇಲಾಖೆಯು ಆಯೋಜಿಸಿರುವ ಕೋಟಿ ವೃಕ್ಷ ಆಂದೋಲನದ ಪ್ರಯುಕ್ತ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿದ ತಾಲೂಕಿನ ಜಿ.ಪಂ. ಸದಸ್ಯೆಯೊಬ್ಬರನ್ನು ಕಡೆಗಣಿಸುವ ಮೂಲಕ ವಲಯ ಅರಣ್ಯಾಧಿಕಾರಿಯವರು ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯ ಪದ್ಮನಾಭ ನಾೈಕ್ ಅಳಿಕೆಯವರು ಸಮಾರಂಭದ ಆಹ್ವಾನ ಪತ್ರವನ್ನು ಸಭೆಯಲ್ಲಿ ಪ್ರದರ್ಶಿಸಿ ತಾಲೂಕಿನಲ್ಲಿ ಒಟ್ಟು 9 ಮಂದಿ ಜಿ.ಪಂ. ಸದಸ್ಯರಿದ್ದಾರೆ ಆದರೆ ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಆಹ್ವಾನ ಪತ್ರದಲ್ಲಿ ಪ.ಪಂ.ಕ್ಕೆ ಸೇರಿದ ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರುರವರ ಹೆಸರನ್ನು ಕೈ ಬಿಟ್ಟು ಉಳಿದ 8 ಮಂದಿಯ ಹೆಸರನ್ನು ಮುದ್ರಿಸಲಾಗಿದೆ ಎಂದು ಸಭೆಯ ಗಮನ ಸೆಳೆದರು.
3

 

2
ಇದಕ್ಕೆ ಪಕ್ಷಬೇಧ ಮರೆತು ಸದಸ್ಯರು ಧ್ವನಿಗೂಡಿಸಿ ಸಭೆಗೆ ಹಾಜರಾಗಿದ್ದ ಅರಣ್ಯ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಪ್ರತಿನಿಧಿಯನ್ನು ಕಾರ್ಯಕ್ರಮದಿಂದ ದೂರವಿರಿಸಿದ್ದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ಜಿ.ಪಂ. ಸದಸ್ಯ ರವೀಂದ್ರ ಕಂಬಳಿಯವರು ಈ ಹಿಂದೆ ಕೂಡ ಕೆಲವು ಇಲಾಖಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.ಮುಂದಿನ ದಿನದಲ್ಲಿ ಇದೇ ರೀತಿ ಮುಂದುವರಿದರೆ ಆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರೆ ಅಧಿಕಾರಿಗಳು ಅನಗತ್ಯವಾಗಿ ಇಂತಹ ಸಣ್ಣಪುಟ್ಟ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ ತಮ್ಮ ಕನಿಷ್ಠ ಜ್ಞಾನದೊಂದಿಗೆ ವ್ಯವಹರಿಸುವಂತೆ ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಯಾವುದೇ ಇಲಾಖೆಯ ಕಾರ್ಯಕ್ರಮಗಳ ಆಹ್ವಾನ ಪತ್ರದ ಕರಡು ಪ್ರತಿಯನ್ನು ಕಾರ್ಯನಿರ್ವಹಣಾಧಿಕಾರಿ ಪರಿಶೀಲಿಸಿ ಬಳಿಕ ಅಂತಿಮ ಮುದ್ರಣಗೊಳಿಸಬೇಕೆಂದು ಸದಸ್ಯೆ ಮಮತಾ ಗಟ್ಟಿ ಸಲಹೆ ನೀಡಿದರು. ಭವಿಷ್ಯದಲ್ಲಿ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರರವರು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.
ಮನೆ ಕಟ್ಟಿ ಕೂತವರಿಗೆ ಹಕ್ಕುಪತ್ರ :
ತಾಲೂಕಿನಲ್ಲಿ ಸರಕಾರಿ ಜಮೀನಿನಲ್ಲಿ ಮನೆಕಟ್ಟಿ ವಾಸ್ತವ್ಯ ಇರುವ ಫಲಾನುಭವಿಗಳಿಗೆ ಯಾವುದೇ ಕುಂಟು ನೆಪ ಹೇಳದೇ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಚಂದ್ರಹಾಸ ಕರ್ಕೇರರವರು ಕಂದಾಯ ಇಲಾಖೆಗೆ ಸ್ಪಷ್ಠ ನಿರ್ದೇಶನ ನೀಡಿದರು. ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತು.
ಕಳಪೆ ಧಾನ್ಯ ಪೂರೈಕೆ:

ಮಿತ್ತನಡ್ಕ ಶಾಲೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮನುಷ್ಯರು ತಿನ್ನಲು ಅಯೋಗ್ಯವಾದಂತ ಕಳಪೆ ಗುಣಮಟ್ಟದ ಧಾನ್ಯ ಪೂರೈಕೆಯಾಗಿದೆ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಸಭೆಯ ಗಮನ ಸೆಳೆದರು. ಇಂತಹ ಕಳಪೆ ಧಾನ್ಯವನ್ನು ಮಕ್ಕಳು ಸೇವಿಸಿ ಅಸ್ವಸ್ಥರಾದರೆ ಯಾರು ಹೊಣೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ಸದಸ್ಯ ಪ್ರಭಾಕರ ಪ್ರಭು ಈ ವಿಚಾರವನ್ನು ಗಂಭೀರ ಪರಿಗಣಿಸಬೇಕು ಮತ್ತು ಈ ಕಳಪೆ ಧಾನ್ಯವನ್ನು ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಅಧಿಕಾರಿ ಒಂದು ಗೋಣಿಚೀಲದಲ್ಲಿ ಸುಮಾರು 12 ಕೆ.ಜಿ.ಯಷ್ಟು ಧಾನ್ಯ ಕಳಪೆಯಾಗಿದ್ದು ಪತ್ತೆಯಾಗಿದೆ. ಇದನ್ನು ಚೀಲದಿಂದ ಪ್ರತ್ಯೇಕವಾಗಿ ವಿಂಗಡಿಸಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಈ ಧಾನ್ಯ ಪೂರೈಕೆಯಾಗಿತ್ತು ಧಾನ್ಯಗಳು ರಾಜ್ಯಮಟ್ಟದಿಂದಲೇ ಪ್ರತಿ ಶಾಲೆಗಳಿಗೆ ಪೂರೈಕೆಯಾಗುತ್ತಿದೆ ಎಂದು ಉತ್ತರಿಸಿದರು. ಬಿಸಿಯೂಟದ ಸಾಮಾಗ್ರಿಗಳು ಪ್ರತಿ ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಸಂದರ್ಭದಲ್ಲಿ ಪರಿಶೀಲಿಸುವಂತೆ ಕಾರ್ಯಮನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸೂಚಿಸಿದರು.

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರನ್ನು ಸಾಮೂಹಿಕ ವರ್ಗಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯ ಹಾದಿ ಹಿಡಿದಿದ್ದರೆ ಜನಪ್ರತಿನಿಧಿಗಳನ್ನು ಪ್ರಶ್ನಿಸತೊಡಗಿದ್ದಾರೆ ಕೆಲವೆಡೆ ಶಾಲೆಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಯುತ್ತಿದೆ ಈ ನಿಟ್ಟಿನಲ್ಲಿ ಶಿಕ್ಷಕರ ವರ್ಗಾವಣೆಯ ಬಗ್ಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ತಾಲೂಕು ಶಿಕ್ಷಣಾಧಿಕಾರಿಯವರೊಂದಿಗೆ ಮಾತುಕತೆ ನಡೆಸಲಾಗುವುದೆಂದು ಅಧ್ಯಕ್ಷ ಕರ್ಕೇರರವರು ಭರವಸೆ ನೀಡಿದರು.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸ್ವಾಗತಿಸಿ ವಂದಿಸಿದರು. ಸದಸ್ಯರಾದ ಆದಂ ಕುಂಞ, ರಮೇಶ್ ಕುಡ್ಮೇರ್, ಹೈದರ್ ಕೈರಂಗಳ, ಯಶವಂತ ಪೂಜಾರಿ, ಪದ್ಮಶ್ರೀ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *