ಬಂಟ್ವಾಳ : ಮಾಲಕನ ಕಿರುಕುಳದಿಂದ ಮಾನಸಿಕವಾಗಿ ನೊಂದ ವಿವಾಹಿತನೋರ್ವ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಕ್ರಷ್ಣಪ್ಪ ಪೂಜಾರಿ(38) ಆತ್ಮಹತ್ಯೆ ಮಾಡಿಕೊಂಡವರು. ಇವರು ಕಳೆದ ಎಂಟು ವರ್ಷಗಳಿಂದ ಮೆಲ್ಕಾರ್ ನ ರಾಜೇಶ್ ಬಾರ್ ಆ್ಯಂಡ್ ರೆಸ್ಟೂರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಗುರುವಾರ ರಾತ್ರಿ ಕ್ಯಾಷ್ ಡವಾರ್ ನಲ್ಲಿನಲ್ಲಿದ್ದ 50 ಸಾವಿರ ರೂಪಾಯಿ ಕಾಣೆಯಾಗಿರುವುದಾಗಿಯೂ, ಈ ಹಣವನ್ನು ನಾನೇ ತೆಗೆದಿರುವುದಾಗಿ ಬಾರ್ ಮಾಲಕ ರಾಜೇಶ್ ಮತ್ತು ಮಾಧವ ಎಂಬಾತ ನನ್ನ ವಿರುದ್ಧ ಆಪಾದನೆ ಹೊರಿಸಿದ್ದಾರೆ. ಅಲ್ಲದೆ 50 ಸಾವಿರ ರೂಪಾಯಿ ಕೊಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಾವಿಗೆ ಮುನ್ನ ಡೆತ್ ನೋಟ್ ನಲ್ಲಿ ಕ್ರಷ್ಣಪ್ಪ ಬರೆದಿಟ್ಟಿದ್ದಾರೆ.
ಈ ಹಿಂದೆ ಕೂಡಾ ಹಲವು ಬಾರಿ ಬಾರ್ ಮಾಲಕ ರಾಜೇಶ್ ಮತ್ತು ಮಾಧವ ಹಣ ಕಾಣೆಯಾದ ಬಗ್ಗೆ ತನ್ನ ವಿರುದ್ಧ ಆಪಾದನೆ ಹೊರಿಸಿದ್ದು ನಿರ್ವಾಹಣೆಯಿಲ್ಲದೆ ತಾನು ಬಡ್ಡಿ ವ್ಯವಹಾರ ನಡೆಸಿ ಅವರಿಗೆ ಹಣ ಸಂದಾಯ ಮಾಡಿರುವುದಾಗಿಯೂ ಡೆತ್ ನೋಟ್ ನಲ್ಲಿ ಅವರು ಬರೆದಿಟ್ಟಿದ್ದಾರೆ.
ಕ್ರಷ್ಣಪ್ಪರಿಗೆ ಒಂದು ಮಗುವಿದ್ದು, ಪತ್ನಿ ಸ್ಥಳೀಯ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಹಾಗೂ ಅವರ ಸಿಬ್ಬಂದಿ ಪರಿಶೀಲನೆ ನಡೆಸಿದ ಪ್ರಕರಣ ದಾಖಸಿ ತನಿಖೆ ಮುಂದುವರಿಸಿದ್ದಾರೆ.

