ಬಂಟ್ವಾಳ:ತುಳುನಾಡಿನ ವೈಶಿಷ್ಟ್ಯಪೂರ್ಣ ತಿಂಗಳು ಎಂದು ಗುರುತಿಸಿಕೊಂಡ ಆಷಾಢ ಮಾಸದಲ್ಲಿ ಪ್ರಕೃತಿ ಸಹಜವಾಗಿ ಸಿಗುವ ವಿವಿಧ ಬಗೆಯ ಸೊಪ್ಪು -ತರಕಾರಿ ಮಾತ್ರವಲ್ಲದೆ ಗೆಡ್ಡೆ- ಗೆಣಸು ಹಾಗೂ ಹಣ್ಣು ಹಂಪಲು ಸೇವಿಸುವ ಮೂಲಕ ಮಕ್ಕಳಿಗೆ ಆರೋಗ್ಯಪೂರ್ಣ ಆಹಾರ ಜೊತೆಗೆ ಹಿರಿಯರು ಅನುಭವಿಸಿದ ಕಷ್ಟದ ದಿನಗಳನ್ನು ಮತ್ತೆ ನೆನಪಿಸಲು ‘ಆಟಿದ ಕೂಟ’ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಹೇಳಿದ್ದಾರೆ. ಇಲ್ಲಿನ ನರಿಕೊಂಬು ಗ್ರಾಮದ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಂಟ್ವಾಳ ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರು ಮತ್ತು ಗುರು-ಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ತುಳುನಾಡಿನ ವಿವಿಧ ಆಚರಣೆಗಳ ಮೂಲಕ ಮಕ್ಕಳಿಗೆ ತಿಳಿಯುತ್ತದೆ. ಆ ಮೂಲಕ ಭವಿಷ್ಯದಲ್ಲಿ ಸುಸಂಸ್ಕ್ರತ ಯುವ ಪೀಳಿಗೆ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕೂಡಾ ಆಟಿದ ಕೂಟ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಚರಿಸಲು ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ಮುಖ್ಯಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೀವಿ ಪೂಜಾರಿ, ಸದಸ್ಯರಾದ ಕಿಶೋರ್ ಶೆಟ್ಟಿ, ದಿವಾಕರ ಭಂಡಾರಿ, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಸಪಲ್ಯ, ಉಪಾಧ್ಯಕ್ಷೆ ಗುಣವತಿ ಶೆಟ್ಟಿ, ಮಾಜಿ ಉಪಾಧ್ಯಕ್ಷ ವಿನ್ಸೆಂಟ್ ಮಿನೇಜಸ್, ಶಿಕ್ಷಕಿಯರಾದ ಪ್ರೆಸಿಲ್ಲ ಎವ್ಲಿನ್ ಡಿಸೋಜ, ಶರ್ಮಿಳಾ ಟಿ., ಲವೀನ ಫೆರ್ನಾಂಡಿಸ್, ಗೌರವ ಶಿಕ್ಷಕ ಅಮರ್, ಪ್ರಿಯ ರಂಜನ್ ಮತ್ತಿತರರು ಇದ್ದರು.ಇದೇ ವೇಳೆ ಕೆಸರಿನ ಗದ್ದೆ ಕ್ರೀಡಾಕೂಟ ಸ್ಪರ್ಧಾ ವಿಜೇತರಿಗೆ ಸ್ಥಳೀಯ ಪ್ರಗತಿಪರ ಕೃಷಿಕ ಕೃಷ್ಣಪ್ಪ ಸಪಲ್ಯ ಬಹುಮಾನ ವಿತರಿಸಿದರು. ಸುಮಾರು 30ಕ್ಕೂ ಮಿಕ್ಕಿ ಬಗೆಯ ತಿಂಡಿ ತಿನಿಸುಗಳನ್ನು ಮಕ್ಕಳ ತಾಯಂದಿರು ಪರಿಚಯಿಸಿದರು. ವಿದ್ಯಾರ್ಥಿನಿ ಕೃತಿಕಾ ಸ್ವಾಗತಿಸಿ, ಸೌಮ್ಯಾ ಶೆಟ್ಟಿ ವಂದಿಸಿದರು. ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
