ಬಂಟ್ವಾಳ : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿನ ಪೂರೈಕೆಗಾಗಿ ತುಂಬೆಯಲ್ಲಿ ನಿರ್ಮಾಣವಾಗಿರುವ 12 ಅಡಿ ಎತ್ತರದ ನೂತನ ವೆಂಟೆಡ್ ಡ್ಯಾಂನಿಂದಾಗಿ ಆಸುಪಾಸಿನಲ್ಲಿ ಮುಳುಗಡೆಯ ಭೀತಿಯಲ್ಲಿರುವ ರೈತರು ಒಂದೆಡೆಯಾದರೆ… ಇತ್ತ ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್‍ರವರು ಅಧಿಕಾರಿಗಳ ದಂಡು ರೈತರು ಹಾಗೂ ಸ್ಥಳೀಯ ಆಡಳಿತ ಜನಪ್ರತಿನಿಧಿಗಳನ್ನು ಕತ್ತಲಲ್ಲಿಟ್ಟು ಗುರುವಾರ ದಿಢೀರ್ ಭೇಟಿ ನೀಡಿ ಡ್ಯಾಂನ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಈ ಡ್ಯಾಂನಿಂದಾಗಿ ಸಜೀಪ ಮುನ್ನೂರು ಸಹಿತ ಅಕ್ಕಪಕ್ಕದ ಮನೆ, ಮಠಗಳು, ಕೃಷಿ ಭೂಮಿ ಎಷ್ಟು ಮುಳುಗಡೆಯಾಗಲಿದೆ ಎಂಬುದನ್ನು ಜಿಲ್ಲಾಡಳಿತವಾಗಲೀ, ಪಾಲಿಕೆಯಾಗಲೀ, ಸಚಿವರಾಗಲಿ ಯಾರೊಬ್ಬರೂ ಕೂಡಾ ಇದುವರೆಗೆ ಸ್ಪಷ್ಟಪಡಿಸಿಲ್ಲ. ಜೊತೆಗೆ ಇಲ್ಲಿನ ಸಂತೃಸ್ತ ರೈತರಿಗೆ ಸಿಗಬೇಕಾದ ನ್ಯಾಯೋಚಿತ ಪರಿಹಾರ ಸೇರಿದಂತೆ ಇತರ ಬೇಡಿಕೆಯೂ ಈಡೇರಿಲ್ಲ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ನೇತೃತ್ವದಲ್ಲಿ ಒಂದೆರಡು ಸಭೆಗಳು ಸಹಿತ ಗ್ರಾಮ ಸಭೆ, ತಾಲೂಕು ಪಂಚಾಯತ್ ಸಭೆ, ಜಿ.ಪಂ. ಸಭೆಗಳಲ್ಲಿ ಚರ್ಚೆಯಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ ಎಂಬುದು ಸಂತೃಸ್ತ ರೈತರ ಅಳಲು. ಈ ಮಧ್ಯೆ ಜಿಲ್ಲಾ ಪ್ರವಾಸದಲ್ಲಿದ್ದ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್‍ರವರು ದಿಡೀರನೆ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆಯನ್ನು ನಡೆಸಿದ್ದು ಈ ಸಂದರ್ಭದಲ್ಲಿ ಅವರೊಂದಿಗಿದ್ದ ಶಾಸಕ ಜೆ.ಆರ್. ಲೋಬೋ, ಮೇಯರ್ ಹರಿನಾಥ್, ಪಾಲಿಕೆಯ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು. ಡ್ಯಾಂನಿಂದಾಗಿ ಮುಳುಗಡೆಯಾಗುವ ಕೃಷಿ ಭೂಮಿಯ ಸಂತೃಸ್ತ ರೈತರಿಗೆ ಪರಿಹಾರ ನೀಡದಿರುವುದು ಸೇರಿದಂತೆ ಡ್ಯಾಂನ ಮೇಲಿನಿಂದ ಕಾಲು ದಾರಿಗೆ ಅವಕಾಶ ಕಲ್ಪಿಸಬೇಕೆಂಬ ರೈತರ ಸಂತೃಸ್ತ ಹೋರಾಟ ಸಮಿತಿಯ ಬೇಡಿಕೆಯನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದೇ ವೇಳೆ ನಿಗದಿತ ಸಮಯದಲ್ಲಿ ಡ್ಯಾಂನ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಸಚಿವರು ಅಧಿಕಾರಿಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಡ್ಯಾಂನ ಕಾಮಗಾರಿಯ ಆರಂಭದಿಂದ ಮುಳುಗಡೆಯ ಭೀತಿಯಲ್ಲಿರುವ ಈ ಭಾಗದ ರೈತರು ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಸಚಿವರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸುತ್ತಲೇ ಇದ್ದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಸಿಕ್ಕಿರುವ ಭರವಸೆಯಂತೇ ಮುಳುಗಡೆ ಪ್ರದೇಶದ ಸರ್ವೆ ಕಾರ್ಯ ಇನ್ನೂಕೂಡಾ ಪೂರ್ಣಗೊಂಡಿಲ್ಲ. ಎಷ್ಟು ಜಮೀನು, ಕೃಷಿ ಭೂಮಿ, ಮುಳುಗಡೆಯಾಗಲಿದೆ ಎಂಬ ನಿಖರ ಮಾಹಿತಿ ಅಧಿಕಾರಿಗಳಿಲ್ಲ. ಹಾಗೆಯೇ ರೈತರಲ್ಲೂ ಈ ಬಗ್ಗೆ ಗೊಂದಲ ಬಗೆಹರಿದಿಲ್ಲ.ನಗರಾಭಿವೃದ್ಧಿ ಸಚಿವರ ಭೇಟಿಯ ವಿಚಾರವನ್ನು ರೈತರ ಸಂತೃಸ್ತ ಹೋರಾಟ ಸಮಿತಿಯ ಮುಖಂಡರಿಗೆ ನೀಡುತ್ತಿದ್ದರೆ ಅವರು ಸಚಿವರನ್ನು ಖುದ್ದು ಭೇಟಿಯಾಗಿ ತಮ್ಮ ಅಹವಾಲನ್ನು ಸಲ್ಲಿಸುವ ಅವಕಾಶ ಇತ್ತು. ಆದರೆ ಅಧಿಕಾರಿಗಳು ಸಚಿವರ ಭೇಟಿಯ ಬಗ್ಗೆ ಕನಿಷ್ಠ ಸ್ಥಳೀಯಾಡಳಿತ ಸಂಸ್ಥೆಗಳಾದ ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರಿಗೂ ಮಾಹಿತಿ ಇರಲಿಲ್ಲ. ಅಧಿಕಾರಿಗಳ ಈ ನಿಲುವಿನಿಂದ ರೈತ ಮುಖಂಡರು ಸ್ಥಳೀಯಾಡಳಿತ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತ ಪಡಿಸಿದರು.
ಕಾಲು ದಾರಿ ಅಸಾಧ್ಯ : ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರೋಶನ್ ಬೇಗ್‍ರವರು ಈಗಾಗಲೇ ಮುಳುಗಡೆ ಪ್ರದೇಶದ ಸರ್ವೆ ಕಾರ್ಯ ಆರಂಭಿಸಲಾಗಿದೆ. ಅದು ಪೂರ್ಣಗೊಂಡ ಬಳಿಕ ಸಂತೃಸ್ತ ರೈತರಿಗೆ ಪರಿಹಾರ ನೀಡಲಾಗುವುವುದು. ಆದರೆ ಡ್ಯಾಂನ ಮೇಲಿನಿಂದ ಕಾಲುದಾರಿಯ ಮೂಲಕ ಇನ್ನೊಂದು ಬದಿಗೆ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸುವುದು ಅಸಾಧ್ಯವಾದ ಮಾತು. ಇದು ಕಾಮಗಾರಿ ಆರಂಭಕ್ಕೆ ಮುನ್ನವೇ ಡ್ಯಾಂನ ಮೂಲ ನಕ್ಷೆಯಲ್ಲೇ ತೋರಿಸಬೇಕಾಗಿತ್ತು. ಇದೀಗ ಕಾಮಗಾರಿ ಅಂತಿಮ ಹಂತ ತಲುಪಿದೆ. ಇನ್ನು ಕಾಲು ದಾರಿ ನಿರ್ಮಾಣ ಅಸಾಧ್ಯ.




