ಮಂಗಳೂರು: ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯು ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ದೇವು ಮೂಲ್ಯಣ್ಣ ಅವರು ಮಾತನಾಡಿ ನಮ್ಮ ಸುತ್ತಮುತ್ತ ವಿವಿಧ ಔಷಧಿ ಗಿಡಗಳನ್ನು ನೆಡುವುದರಿಂದ ಪರಿಸರದಲ್ಲಿ ಒಳ್ಳೆಯ ವಾತವರಣ ಸೃಷ್ಟಿಯಾಗುತ್ತದೆ. ಗಿಡಗಳನ್ನು ನೆಟ್ಟರೆ ಸಾಲದು ಅದರ ಪಾಲನೆ ಪೋಷಣೆ ಅಗತ್ಯ ಗಿಡ ಬೆಳೆದು ಮರವಾಗುವ ತನಕ ನಾವು ಅದಕ್ಕೆ ತಾಯಿಯು ಮಗುವಿನ ಆರೈಕೆ ಮಾಡುವ ಹಾಗೆ ಪಾಲನೆ ಮಾಡುತ್ತ ಬರಬೇಕು ಎಂದರು.

ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷರಾದ ಯತೀಶ್ ಸಾಲ್ಯಾನ್ ಮಾತನಾಡಿ ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯು ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡುತ್ತ ಬಂದಿದೆ ಮುಂದೆಯೂ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದರು. ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಕಾರ್ಯದರ್ಶಿ ಶಿವಪ್ರಸಾದ್ ಭಟ್ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸರ್ವಸದಸ್ಯರು ಉಪಸ್ಥಿತರಿದ್ದರು.
