ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ನಡೆಯುವ ಕಾಮಗಾರಿಗಳನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕು. ಅಸಮರ್ಪಕ ಕಾಮಗಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯರು ಸೋಮವಾರ ಒತ್ತಾಯಿಸಿದರು. ಪುರಸಭೆಯಲ್ಲಿತ್ಯಾಜ್ಯ ಸಂಗ್ರಹಿಸುವವರು ಸೂಕ್ತವಾಗಿ ಸಂಗ್ರಹ ಮಾಡುತ್ತಿಲ್ಲದಿರುವುದರ ಬಗ್ಗೆ ಸದಸ್ಯ ದಿನೇಶ್ ಪೂಜಾರಿ ಮತ್ತು ಪ್ರಸಾದ್ ಕುಮಾರ್ ಸಭೆಯ ಗಮನಕ್ಕೆ ತಂದರು. ವರ್ಷಕ್ಕೆ ತ್ಯಾಜ್ಯ ವಿಲೇವಾರಿ ಸಂಬಂಧ 3-4 ಕೋಟಿ ಖರ್ಚಾಗುತ್ತಿದ್ದರೂ ಸಮರ್ಪಕವಾದ ಕೆಲಸ ಆಗುತ್ತಿಲ್ಲ ಎಂದು ಸದಸ್ಯ ಹನೀಫ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳು ಬರೀ ಕಚೇರಿಯಲ್ಲಿ ಕುಳಿತುಕೊಳ್ಳದೆ, ಸ್ಥಳದಲ್ಲಿ ನಿಂತು ಕೆಲಸ ಮಾಡಿಸಬೇಕು ಎಂದು ಸದಸ್ಯೆ ರಮಣಿ ಸೂಚಿಸಿದರು.

ಮಾರೂರಿನಲ್ಲಿ ಸುಮಾರು 30 ಮಂದಿಗೆ ಆಶ್ರಯ ನಿವೇಶನಗಳನ್ನು ವಿತರಿಸಿದ್ದು, ಅದಕ್ಕೆ ನೀರಿನ ವ್ಯವಸ್ಥೆ, ರಸ್ತೆ, ದಾರಿದೀಪ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಎರಡು ವರ್ಷಗಳಿಂದ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆದು ಅಗತ್ಯ ಕ್ರಮಗಳನ್ನು ರೂಪಿಸಿದ್ದರೂ, ಅಧಿಕಾರಿಗಳು ಆ ಬಗ್ಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಆಲ್ವಿನ್ ಮಿನೇಜಸ್ ಸಭೆಯ ಗಮನ ಸೆಳೆದರು. ತುರ್ತಾಗಿ ಕೆಲಸ ನಿರ್ವಹಿಸುವುದಾಗಿ ಎಂಜಿನಿಯರ್ ದಿನೇಶ್ ಭರವಸೆ ನೀಡಿದರು.
ಪರಿಸರ ದಿನಾಚರಣೆಯ ಅಂಗವಾಗಿ ಪುರಸಭೆಯ ವತಿಯಿಂದ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ಲಾಸ್ಟಿಕ್ ನಿಷೇಧಪಡಿಸಿರುವ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘಗಳ ಮೂಲಕ ತಯಾರಿಸಲಾದ ಬಟ್ಟೆಯ ಬ್ಯಾಗುಗಳನ್ನು ಸದಸ್ಯರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕರಿಂಜೆ ವಾರ್ಡ್ಗೆ ಸದಸ್ಯರಾಗಿ ಚುನಾಯಿತರಾದ ವಿನೋದ್ ರೋಶನ್ ಸೆರಾವೋ ಅವರನ್ನು ಬರಮಾಡಿಕೊಳ್ಳಲಾಯಿತು. ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ ಅವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಶೀನಾ ನಾಯ್ಕ್, ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಸದಸ್ಯ ಕೊರಗಪ್ಪ, ಕಂದಾಯ ನಿರೀಕ್ಷಕ ಧನಂಜಯ, ಆರೋಗ್ಯ ನಿರೀಕ್ಷಕಿ ಇಂದು ಎಂ ಉಪಸ್ಥಿತರಿದ್ದರು.
ನಿಧಾನಗತಿಯಲ್ಲಿ ಸಾಗುತ್ತಿರುವ ಅಭಿವೃದ್ಧಿ ಕೆಲಸಗಳು, ಗೊತ್ತುಗುರಿಯಿಲ್ಲದ ಪ್ಲಾಸ್ಟಿಕ್ ನಿಷೇಧ ನಿಯಮ, ನೆನೆಗುದಿಗೆ ಬಿದ್ದಿರುವ ಪುರಸಭೆ ಮಾರುಕಟ್ಟೆ, ಒಳಚರಂಡಿ ವ್ಯವಸ್ಥೆ, ಪಾರ್ಕಿಂಗ್, ಆಶ್ರಯ ಕಾಲೋನಿ ಅವ್ಯವಸ್ಥೆ ಸಹಿತ ವಿವಿಧ ವಿಚಾರಗಳ ಕುರಿತು ಸೋಮವಾರ ನಡೆದ ಪುರಸಭೆಯ ಅಧಿವೇಶನಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಹುಕೋಟಿ ವೆಚ್ಚದ, ಮೂಡುಬಿದಿರೆಗೆ ತೀರಾ ಅಗತ್ಯವಿರುವ ಹೊಸ ಮಾರುಕಟ್ಟೆ ಸಂಕೀರ್ಣ ಯೋಜನೆ ವಿಳಂಭವಾಗುತ್ತಿದೆ. ಯೋಜನೆಯ ಕಡತ ಸರ್ಕಾರ ಮಟ್ಟದಲ್ಲಿದೆ ಎಂದು ಹೇಳಲಾಗುತ್ತಿದೆಯೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗುತ್ತಿಲ್ಲ ಎಂದು ಬಹುಮಹಡಿ ಕಟ್ಟಡಗಳ ಸಂಖ್ಯೆ ದಿನೇ ದಿನೇ ಏರುತ್ತಿದ್ದರೂ ಅತ್ಯಗತ್ಯವಾದ ಒಳಚರಂಡಿ ಯೋಜನೆ ಆಗಿಲ್ಲ. ಕೇಳಿದರೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿದೆ ಎನ್ನುತ್ತೀರಿ. ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದೆ ಎಂಬ ಮಾಹಿತಿ ಇದೆ ಎಂದು ಸದಸ್ಯ ಉಮಾನಾಥ ದೇವಾಡಿಗ ಮತ್ತು ಬಾಹುಬಲಿ ಪ್ರಸಾದ್ ಪ್ರಶ್ನಿಸಿದರೆ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಪುರಸಭೆಯಿಂದ ಜಿಲ್ಲಾಧಿಕಾರಿಗಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸುವಂತೆ ಸದಸ್ಯ ಸುರೇಶ್ ಕೋಟ್ಯಾನ್ ಸೂಚಿಸಿದರು.
ಮೂರು ಅವಧಿಗೆ ಪುರಸಭಾ ಸದಸ್ಯರಾಗಿದ್ದು, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಎಂ. ಶೀನಪ್ಪ ಅವರ ಗೌರವಾರ್ಥ ಮೌನ ಆಚರಿಸಲಾಯಿತು. ನಗರದ ನಿಶ್ಮಿತಾ ಟವರ್ಸ್ ಬಳಿ ಅಥವಾ ರಿಂಗ್ ರೋಡ್ ಸಂಪರ್ಕಿಸುವಲ್ಲಿ ಇರುವ ವೃತ್ತಕ್ಕೆ ಎಂ. ಶೀನಪ್ಪ ವೃತ್ತ ಎಂದು ನಾಮಕರಣ ಮಾಡುವಂತೆ ಸದಸ್ಯ ಪ್ರಸಾದ್ ಕುಮಾರ್ ಆಗ್ರಹಿಸಿದರು.ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಿದ್ದರೂ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಹನೀಫ್ ಆಗ್ರಹಿಸಿದಾಗ ಪರಿಸರ ಅಭಿಯಂತರೆ ಶಿಲ್ಪಾ ಅವರು ಮುಂದೆ ಅಂಗಡಿಗಳಿಗೆ ದಾಳಿ ನಡೆಸಿ ಕ್ರಮ ಕೈಗೊಳ್ಳಗಾಗುತ್ತದೆ ಎಂದು ಹೇಳಿದರು.
ಮೀನಿನ ಮಾರ್ಕೆಟ್ಗೆ ಶೀಟು ಹಾಕುವ ಕೆಲಸ ಟೆಂಡರ್ ಮಾಡದೇ ಮಾಡಲಾಗಿದೆ, ಆಕ್ಷೇಪ ಹಾಕಿದ್ದರೂ ಗುತ್ತಿಗೆದಾರನಿಗೆ ಪಾವತಿ ಮಾಡುವ ಹಿನ್ನೆಲೆಯಲ್ಲಿ ನಿರ್ಣಯ ಬರೆಯಲಾಗಿದೆ ಎಂದು ಸದಸ್ಯ ಉಮನಾಥ ದೇವಾಡಿಗ ಆಕ್ಷೇಪಿಸಿದರು. ತರಕಾರಿ ಮಾರ್ಕೆಟ್ ಕೂಡಾ ಅವ್ಯವಸ್ಥೆಯಿಂದ ಕೂಡಿದ್ದು, ತರಕಾರಿ ಮಾರ್ಕೆಟ್ನ ಕೆಲಸವನ್ನು ಕೂಡಾ ಕೂಡಲೇ ಮಾಡುವಂತೆ ಸದಸ್ಯ ಮನೋಜ್ ಆಗ್ರಹಿಸಿದರು.ಹಿಂದಿನ ಸರ್ಕಾರ ಇರುವಾಗಲೇ ಮಾರುಕಟ್ಟೆ ಆಗಬೇಕಿತ್ತು. ಆದರೆ ರಾಜಕೀಯ ಮಾಡಿ ಕೆಲಸ ಆಗದಂತೆ ಮಾಡಲಾಗಿದೆ. ಈಗ ಮೂವರು ಅಧ್ಯಕ್ಷರು ಬದಲಾದರೂ ಕೆಲಸ ಆಗುತ್ತಿಲ್ಲ ಎಂದು ಸದಸ್ಯ ಹನೀಫ್ ಸಭೆಯ ಗಮನಸೆಳೆದರು. ವಾರ್ಡ್ಗಳಲ್ಲಿ ಕೆಲಸ ಮಾಡುವಾಗ ತಾರತಮ್ಯ ಮಾಡಲಾಗುತ್ತಿದೆ. ಕೆಲವೇ ವಾರ್ಡ್ಗಳ ಕಾಮಗಾರಿಗಳು ಆಗುತ್ತಿವೆ ಎಂದು ಸದಸ್ಯೆ ಪೇಮಾ ಸಾಲ್ಯಾನ್, ಎಲಿಜಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕಮಾನುಗಳಲ್ಲಿ ಸ್ಥಳಗಳನ್ನು ತಪ್ಪಾಗಿ ನಮೂದಿಸಿದ್ದು ಕೂಡಲೇ ಸರಿಪಡಿಸುವಂತೆ ಸದಸ್ಯ ನಾಗರಾಜ್ ಪೂಜಾರಿ ಆಗ್ರಹಿಸಿದರು.


