ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಬಳಿಕ ಗ್ರಾಮೀಣ ಪ್ರದೇಶದಲ್ಲಿರುವ ಬಡಮಕ್ಕಳಿಗೆ ಖಾಸಗಿ ಸಂಸ್ಥೆಗಳಲ್ಲಿ ದುಬಾರಿ ಶುಲ್ಕ ಭರಿಸಿ, ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಮೂಡುಬಿದಿರೆ ಹೋಬಳಿಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಶಾಲೆಯಾಗಬೇಕೆಂದು ಇರುವೈಲು ಪಂಚಾಯಿತಿ ಸದಸ್ಯ ವಲೇರಿಯನ್ ಕುಟಿನ್ಹಾ ಆಗ್ರಹಿಸಿದರು.  ಕೊನ್ನೆಪದವು ಹಾಲು ಉತ್ಪಾದಕರ ಕೇಂದ್ರದಲ್ಲಿ ಇರುವೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನವೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ 2016-2017ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಸರ್ಕಾರಿ ಕಾಲೇಜು, ಬೆಂಬಲ ಬೆಲೆಯಲ್ಲಿ ಸರ್ಕಾರ ತೆಂಗಿನ ಕಾಯಿಯನ್ನು ಖರೀದಿಸಬೇಕು ಹಾಗೂ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ವಲೇರಿಯನ್ ಅಧಿಕಾರಿಗಳ ಮುಂದಿಟ್ಟರು.

ಪಿಡಿಒ ಅವರಿಗೆ ಮುಚ್ಚೂರಿನಲ್ಲೂ ಕೆಲಸ ನಿರ್ವಹಿಸಲು ಇರುವುದರಿಂದ ಇರುವೈಲಿನಲ್ಲಿ 3 ದಿವಸ ಮಾತ್ರ ಇರುತ್ತಾರೆ. ಇದರಿಂದ ಗ್ರಾಮಸ್ಥರಿಗೆ ಸಕಾಲದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಇರುವೈಲು ಪಂಚಾಯಿತಿಗೆ ಕಾಯಂ ಪಿಡಿಒ ನೇಮಕವಾಗಬೇಕು ಎಂದು ಗ್ರಾಮಸ್ಥ ಶೀನ ಸಭೆಯಲ್ಲಿ ಆಗ್ರಹಿಸಿದರು. ಈ ಕುರಿತು ದ.ಕ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಯವರಲ್ಲಿ ಮನವಿ ಮಾಡಲಾಗುವುದೆಂದು ನಿರ್ಣಯ ಕೈಗೊಳ್ಳಲಾಯಿತು. ತೋಡಾರು ಗ್ರಾಮದಲ್ಲಿ ದಾರಿ ದೀಪಗಳ ಕಿತ್ತು ತೆಗೆಯಲಾಗಿದೆ ಎಂದು ಗ್ರಾಮಸ್ಥರು ದೂರಿದರು.

ಇಬ್ಬರು ಮೆಸ್ಕಾಂ ಸಿಬ್ಬಂದಿಗಳಿದ್ದರೂ ಸಂಜೆ 4ಗಂಟೆಯಿಂದ ಬೆಳಿಗ್ಗೆ 9.30ರ ತನಕ ಮೊಬೈಲ್ ಸ್ವಿಚ್ ಆಫ್ ಮಾಡುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ, ಹೆಚ್ಚುವರಿ ಒಬ್ಬರು ಲೈನ್‍ಮ್ಯಾನ್ ನೇಮಿಸುವಂತೆ ನೋಡೆಲ್ ಅಧಿಕಾರಿ, ಮೆಸ್ಕಾಂ ಅಧಿಕಾರಿಗೆ ಸಲಹೆ ನೀಡಿದರು. ಕುಡಿಯುವ ನೀರು ಸರಬರಾಜು ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ನೀರು ಸಮಿತಿಯ ಸಭೆ ಕರೆದು, ನೀರಿನ ಸಮಸ್ಯೆ ಬಗೆಹರಿಸುವಂತೆ ನೋಡೆಲ್ ಅಧಿಕಾರಿ ಪಿಡಿಒ ಅವರಿಗೆ ತಿಳಿಸಿದರು.

ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಸಭೆಯನ್ನು ಉದ್ದೇಶಿಸಿ, ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ, ಇರುವೈಲು ಪಂಚಾಯಿತಿಯನ್ನು ಮಾದರಿಯಾಗಿಸುವಲ್ಲಿ ಎಲ್ಲರು ಶ್ರಮವಹಿಸಬೇಕೆಂದರು.ವಿವಿಧ ಇಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ಬ್ರಿಜಿತ್ ಕುಟಿನ್ಹಾ, ಪ್ರಭಾರ ಪಿಡಿಒ ಯಶವಂತ್, ಪ್ರಭಾರ ಕಾರ್ಯದರ್ಶಿ ರಾಜೀವಿ ಸಭೆಯಲ್ಲಿದ್ದರು.

By suddi9

Leave a Reply

Your email address will not be published. Required fields are marked *