ಬಂಟ್ವಾಳ: ತಾಲೂಕು ಪಂಚಾಯತ್ನ ಮೂರನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆದಿದ್ದು ಅಧ್ಯಕ್ಷರಾಗಿ ಸಜೀಪಪಡು ತಾ.ಪಂ.ಕ್ಷೇತ್ರದ ಸದಸ್ಯ ಯಶವಂತ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ಸರಪಾಡಿ ತಾ.ಪಂ.ಕ್ಷೇತ್ರದ ಸದಸ್ಯೆ ವಿಲಾಸಿನಿ ಆಯ್ಕೆಯಾಗಿದ್ದಾರೆ.

33 ಸದಸ್ಯ ಬಲ ಹೊಂದಿರುವ ಬಂಟ್ವಾಳ ತಾಲೂಕು ಪಂಚಾಯತ್ನಲ್ಲಿ ಬಿಜೆಪಿ 17 ಹಾಗೂ ಕಾಂಗ್ರೆಸ್ 16 ಸದಸ್ಯ ಸ್ಥಾನ ಹೊಂದಿದೆ. ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಪಕ್ಷ ಕಾಂಗ್ರೆಸ್ ಬಿಜೆಪಿ ಸದಸ್ಯರನ್ನು ಸೆಳೆಯುವ ಯಾವುದೇ ತಂತ್ರಕ್ಕೆ ಮುಂದಾಗದಿರುವುದು ಬಿಜೆಪಿ ನಿರಾಯಾಸವಾಗಿ ಮತ್ತೆ ಆಡಳಿತ ಚುಕ್ಕಾಣಿ ಪಡೆಯಲು ಸಹಕಾರಿಯಾಯಿತು.
ನಾಮಪತ್ರ ಸಲ್ಲಿಕೆ:
ಸೋಮವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ ಯಶವಂತ ದೇರಾಜೆ ಹಾಗೂ ಕಾಂಗ್ರೆಸ್ನಿಂದ ಶರೀಫ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷೆ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯಿಂದ ವಿಲಾಸಿನಿ ಹಾಗೂ ಕಾಂಗ್ರೆಸ್ನಿಂದ ಶಕುಂತಲಾ ಕುಲಾಲ್ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಾಮಪತ್ರ ಪರಿಶೀಲಿಸಲಾಗಿದ್ದು, ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷ ಉಪಾಧ್ಯರನ್ನು ಆಯ್ಕೆ ಮಾಡಿದರು. ಸಹಾಯಕ ಆಯುಕ್ತ ಡಾ.ಪ್ರಶಾಂತ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ತಾ.ಪಂ.ಕಾರ್ಯನಿರ್ವ ಹಣಾದಿಕಾರಿ ಸಿಪ್ರಿಯಾನ್ ಮಿರಾಂಡ ಹಾಜರಿದ್ದರು.
ತಾ.ಪಂ.ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯಶವಂತ ದೇರಾಜೆ ಸಜೀಪಪಡು ತಾ.ಪಂ. ಕ್ಷೇತ್ರದ ಸದಸ್ಯರಾಗಿದ್ದಾರೆ. ಪಿಯುಸಿ ವಿದ್ಯಾಭ್ಯಾಸ ಹೊಂದಿರುವ ಇವರು 5 ಬಾರಿ ತಾಲೂಕು ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದು ಇದೇ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿ ಇದೀಗ ಅಧ್ಯಕ್ಷ ಗಾದಿ ಅಲಂಕರಿಸಿದ್ದಾರೆ. ಉಪಾಧ್ಯಕ್ಷೆಯಾಗಿ ಆಯ್ಕೆಯಗಿರುವ ವಿಲಾಸಿನಿ ಸರಪಾಡಿ ತಾ.ಪಂ.ಕ್ಷೇತ್ರದ ಸದಸ್ಯೆಯಾಗಿದ್ದಾರೆ. ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಹೊಂದಿರುವ ಇವರು 2 ಬಾರಿ ತಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದು ಇದೇ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿ ಉಪಾಧ್ಯಕ್ಷರಾಗಿದ್ದಾರೆ.


