ಬಂಟ್ವಾಳ: ಇಲ್ಲಿನ ಸಜಿಪಮೂಡ ಗ್ರಾಮದ ಸರ್ವೆ ನಂಬ್ರ 246/11 ಮತ್ತು 246/1ಎ2ರಲ್ಲಿ ಹಿಂದೂ ಸಾರ್ವಜನಿಕ ಸ್ಮಶಾನಕ್ಕಾಗಿ ಕಳೆದ 16 ವರ್ಷಗಳ ಹಿಂದೆ ಮೀಸಲಿಟ್ಟ 45 ಸೆಂಟ್ಸ್ ಜಮೀನಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಲು ರಾಜಕೀಯ ಪ್ರೇರಿತವಾಗಿ ವಿಳಂಬ ಧೋರಣೆ ಅನುಸರಿಸುತ್ತಿರುವ ಗ್ರಾಮ ಪಂಚಾಯಿತಿಗೆ ಇದೇ 18ರಂದು ಬೀಗ ಜಡಿದು ಪ್ರತಿಭಟನೆ ನಡೆಸವುದಾಗಿ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ಉದಯ ಕುಮಾರ್ ಮತ್ತು ಬಜರಂಗ ದಳ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್ ಎಚ್ಚರಿಸಿದ್ದಾರೆ.

ಬಿ.ಸಿ.ರೋಡ್‍ನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಜಮೀನಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ರಾಜಕೀಯ ಪ್ರೇರಿತ ಆಕ್ಷೇಪಣೆ ಬಗ್ಗೆ ಕಳೆದ ವರ್ಷವೇ ಇಲ್ಲಿನ ತಹಶೀಲ್ದಾರ್ ಮತ್ತು ಮಂಗಳೂರು ಉಪ ವಿಭಾಗಾಧಿಕಾರಿ ಮತ್ತಿತರ ಅಧಿಕಾರಿಗಳು ಸ್ಥಳ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಒಟ್ಟು 7,609 ಮಂದಿ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಶೇ.57ರಷ್ಟಿರುವ ಹಿಂದೂಗಳಿಗೆ ನಿರ್ಜನ ಪ್ರದೇಶವಾಗಿರುವ ಇಲ್ಲಿ ಗೌರವಯುತ ದಫನ ನಡೆಸುವ ಮೂಲಭೂತ ಹಕ್ಕು ಹೊಂದಿದ್ದಾರೆ.

ಈ ಬಗ್ಗೆ ಮುಂದಿನ ಮೂರು ತಿಂಗಳೊಳಗೆ ಗ್ರಾಮ ಪಂಚಾಯಿತಿ ಸೂಕ್ತ ಮೂಲಭೂತ ಸೌಕರ್ಯ ಒದಗಿಸಿ ಸ್ಮಶಾನ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೀಡಿರುವ ಆದೇಶವನ್ನೂ ಕಡೆಗಣಿಸಲಾಗಿದೆ ಎಂದು ಶರಣ್ ಪಂಪ್‍ವೆಲ್ ಆರೋಪಿಸಿದರು. ಈಗಾಗಲೇ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಸಹಿತ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ವತಿಯಿಂದ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದು, ಇಲ್ಲಿನ ಪಂಚಾಯಿತಿ ಅಧ್ಯಕ್ಷ ಗಣಪತಿ ಭಟ್ ಅವರು ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಜಯಪ್ರಕಾಶ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ್ ಸರಪಾಡಿ ಅಶೋಕ್ ಶೆಟ್ಟಿ, ಬಜರಂಗ ದಳ ಜಿಲ್ಲಾ ಸಂಯೋಜಕ ಭಾಸ್ಕರ ಧರ್ಮಸ್ಥಳ, ಗುರುರಾಜ್ ಬಂಟ್ವಾಳ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *