ಬಂಟ್ವಾಳ:ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರೋಡಿ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಪಂಪಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಇಲ್ಲಿನ 10ಕ್ಕೂ ಮಿಕ್ಕಿ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ವಿದ್ಯುತ್ ಪರಿವರ್ತಕದ ಸುತ್ತಲೂ ಪೊದೆ ಆವರಿಸಿಕೊಂಡಿದ್ದು, ಮಳೆಗಾಲದಲ್ಲಿ ಪದೇ ಪದೇ ಬೆಂಕಿ ಉಗುಳುತ್ತಿದೆ. ಇನ್ನೊಂದೆಡೆ ಇಲ್ಲಿನ ಬಹುತೇಕ ಹೈಟೆನ್ಶನ್ ತಂತಿ ಕಳೆದ 35 ವರ್ಷಗಳಷ್ಟು ಹಳೆಯದಾಗಿದ್ದು, ಮಕ್ಕಳಿಗೂ ಕೈಗೆಟುಕುವಷ್ಟು ಎತ್ತರದಲ್ಲಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇವಲ 63 ಎಚ್‍ಪಿ ಸಾಮಥ್ರ್ಯ ಹೊಂದಿರುವ ವಿದ್ಯುತ್ ಪರಿವರ್ತಕದಿಂದ ಇಲ್ಲಿನ ಮನೆ ಮತ್ತು ಕೃಷಿಕರ ಪಂಪುಗಳಿಗೆ ಸಾಕಷ್ಟು ವಿದ್ಯುತ್ ಪೂರೈಕೆಯಾಗದೆ ವೋಲ್ಟೇಜ್ ಸಮಸ್ಯೆಯನ್ನೂ ಎದುರಿಸುತ್ತಿದೆ.
ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ಹೆಚ್ಚುವರಿಯಾಗಿ ಇನ್ನೊಂದು ವಿದ್ಯುತ್ ಪರಿವರ್ತಕ ಮಂಜೂರಾಗಿದೆ ಎಂದು ಭರವಸೆ ನೀಡಿದ್ದ ಮೆಸ್ಕಾಂ ಅಧಿಕಾರಿಗಳು ಬಳಿಕ ಮೌನವಾಗಿದ್ದಾರೆ. ಈ ಹೆಚ್ಚುವರಿ ವಿದ್ಯುತ್ ಪರಿವರ್ತಕ ಮತ್ತು ಇಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
