ಪುಂಜಾಲಕಟ್ಟೆ : ಜೂ.29 :ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಮಂಗಳವಾರ ರಾತ್ರಿ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಬಾಗದಲ್ಲಿರುವ ಮನೆಯೊಂದರ ಆವರಣ ಗೋಡೆ ಸಹಿತ ಮಣ್ಣು ಕುಸಿದು ಬಿದ್ದಿದ್ದು ಅಂಗನವಾಡಿ ಕೇಂದ್ರಕ್ಕೆ ಹಾನಿಯಾಗಿದೆ. ಆವರಣ ಗೋಡೆಯ ಕಲ್ಲು ಮತ್ತು ಮಣ್ಣು ಅಂಗನವಾಡಿ ಕೇಂದ್ರದ ಛಾವಣಿ ಮತ್ತು ಕಟ್ಟಡದ ಒಂದು ಪಾಶ್ರ್ವಕ್ಕೆ ಬಿದ್ದಿದುದರಿಂದ ಛಾವಣಿಯ ಹಂಚು ,ಸಿಮೆಂಟ್ ಶೀಟ್ಗಳು ತುಂಡಾಗಿದೆ.ಕಟ್ಟಡದ ಗೋಡೆ ಮತ್ತು ಮುಂಭಾಗದ ಕಂಬ ಬಿರುಕು ಬಿಟ್ಟಿದೆ. ಶೌಚಾಲಯ ,ನೀರಿನ ಟ್ಯಾಂಕ್ಹಾನಿಗೊಂಡಿದೆ. ಕೇಂದ್ರದೊಳಗೆ ಹಂಚಿನ ತುಂಡುಗಳು ಬಿದ್ದಿದ್ದು ನೀರು ತುಂಬಿದೆ.ಘಟನೆಯಿಂದ ಸುಮಾರು 4 ಲ.ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ರಾತ್ರಿ ವೇಳೆ ಘಟನೆ ನಡೆದುದರಿಂದ ಅಪಾಯವಾಗುವುದು ತಪ್ಪಿದೆ.


ಇಲ್ಲಿನ ಬಂಗ್ಲೆ ಮೈದಾನದ ಸಾರ್ವಜನಿಕ ರಂಗ ಮಂದಿರದ ಹಿಂಭಾಗದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಚರಿಸುತ್ತಿದ್ದು ಪರಿಸರದ ಸುಮಾರು 20 ಮಂದಿ ಮಕ್ಕಳು ಕೇಂದ್ರಕ್ಕೆ ಬರುತ್ತಾರೆ.ಪ್ರಸ್ತುತ ಸಮೀಪದ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಂಗಣದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಚರಿಸಲು ಅವಕಾಶ ಕಲ್ಪಿಸಲಾಗಿದೆ.ಪ್ರಸ್ತುತ ಕಟ್ಟಡ ಹಾನಿಗೊಂಡಿರುವುದರಿಂದ ನೂತನ ಕಟ್ಟಡ ನಿರ್ಮಿಸಲು ಅನುದಾನಕ್ಕೆ ಸರಕಾರವನ್ನು ವಿನಂತಿಸುವುದಾಗಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.ಆವರಣ ಗೋಡೆ ಮತ್ತು ಮಣ್ಣು ಕುಸಿದಿರುವುದರಿಂದ ಸುಮಾರು 50 ಸಾವಿರ ರೂ.ನಷ್ಟವಾಗಿದ್ದು ಮನೆಗೂ ಅಪಾಯವಿದೆ. ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್,ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ,ಅಂಗನವಾಡಿ ಮೇಲ್ವಿಚಾರಕಿ ಸಿಂಧು ,ಪ್ರಭಾರ ಪಂ.ಅ.ಅಕಾರಿ ಬಾಲಕೃಷ್ಣ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್ ಮತ್ತಿತರರು ಅಂಗನವಾಡಿಯ ಪರಿಕರಗಳನ್ನು ಸ್ಥಳಾಂತರಿಸಲು ಮತ್ತು ಕಲ್ಲು ,ಮಣ್ಣು ತೆರವುಗೊಳಿಸಲು ಸಹಕರಿಸಿದ್ದರು.

