ಬಂಟ್ವಾಳ:ತಾಲ್ಲೂಕಿನ ಗ್ರಾಮೀಣ ಪ್ರದೇಶ ನೈನಾಡು ಸರ್ಕಾರಿ ಪ್ರೌಢಶಾಲೆಯು ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ ಶೇ.100 ಫಲಿತಾಂಶ ಸಾಧನೆ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣರಾದ ಇಲ್ಲಿನ ಶಿಕ್ಷಕರನ್ನೇ ಸನ್ಮಾನಿಸುವ ಮೂಲಕ ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ನಾಗರಿಕರು ಗಮನ ಸೆಳೆದಿದ್ದಾರೆ.ತಾಲ್ಲೂಕಿನ ನೈನಾಡು ಸರ್ಕಾರಿ ಪೌಢಶಾಲೆಯಲ್ಲಿ ‘ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಪ್ರತಿಭೆಗೆ ತಕ್ಕ ಪುರಸ್ಕಾರ’ ಧ್ಯೇಯ ವಾಕ್ಯದಡಿ ಈಚೆಗೆ ಏರ್ಪಡಿಸಿದ್ದ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗೆ ಫಲಿತಾಂಶಕ್ಕಾಗಿ ಶ್ರಮಿಸಿದ ಶಿಕ್ಷಕರಿಗೂ ವಿಶೇಷ ಗೌರವ ದೊರೆಯಿತು.

ನೈನಾಡು ಚರ್ಚ್ ನ ಧರ್ಮಗುರು ಫೆಡ್ರಿಕ್ ಮೊಂತೆರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಶೈಕ್ಷಣಿಕ ಸಾಧನೆ ಮುಂದುವರಿಯಬೇಕು ಎಂದು ಶುಭ ಹಾರೈಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಇವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಧನೆ ಶ್ಲಾಘನೀಯ ಎಂದರು. ಇದೇ ವೇಳೆ ಸಾಧಕ ವಿದ್ಯಾರ್ಥಿಗಳಾದ ನಿಶ್ಚಿತಾ, ವಿಲ್ಮಾ ರಾಡ್ರಿಗಸ್, ನವೀನ್, ಮಲ್ಲಿಕಾ, ರೋಶನ್, ರಕ್ಷಿತ್, ಅಕ್ಷಿತಾ, ಕೀರ್ತಿ ಪ್ರಿಯಾ, ಮಂಜುನಾಥ ಇವರನ್ನು ಅಭಿನಂದಿಸಲಾಯಿತು. ಧರ್ಮಗುರು ಫೆಡ್ರಿಕ್ ಮೊಂತೆರೊ ಸಹಿತ ಶಾಲಾಭಿವೃದ್ಧಿ ಸಮಿತಿ, ನೈನಾಡು ಏಂಜೆಲ್ ಕ್ರಿಕೆಟರ್ಸ್ , ಕಾವಳಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಭಾಗೀರಥಿ, ಸ್ಥಳೀಯ ನಿವಾಸಿಗಳಾದ ಹರೀಶ ಪೂಜಾರಿ, ಹರೀಶ ಶೆಟ್ಟಿ, ಪಿಂಟೋ ಬೇಕರಿ ಮಾಲೀಕ ನೆಲ್ವಿಸ್ಟರ್ ಪಿಂಟೊ, ವಿಷಯವಾರು ಶಿಕ್ಷಕರು ಸಾಧಕ ವಿದ್ಯಾರ್ಥಿಗಳಿಗೆ ನಗದು ಸಹಿತ ವಿವಿಧ ಬಹುಮಾನ ಕೊಡುಗೆ ಸಲ್ಲಿಸಿದರು.
ಈಚೆಗೆ ಏರ್ಪಡಿಸಿದ್ದ ‘ಸ್ಮಾರ್ಟ್ ತರಗತಿ’ ಕಾರ್ಯಕ್ರಮಕ್ಕೆ ಮುಖ್ಯಶಿಕ್ಷಕ ಅಶೋಕ್ ಕುಮಾರ್ ಚಾಲನೆ ನೀಡಿದರು.
ಶಿಕ್ಷಣ ಸಂಯೋಜಕಿ ಸುಜಾತ, ಗ್ರಾಮ ಪಂಚಾಯಿತಿ ಸದಸ್ಯೆ ಸರೋಜ ಡಿ.ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಇನಾಸ್ ರಾಡ್ರಿಗಸ್, ಸದಸ್ಯ ಹರೀಶ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪ್ರಕಾಶ ನಾಯ್ಕ್ ವಂದಿಸಿದರು. ಶಿಕ್ಷಕ ಹೇಮಣ್ಣ ಕಾರ್ಯಕ್ರಮ ನಿರೂಪಿಸಿದರು.

