ಬಂಟ್ವಾಳ: ಬಿ.ಜೆ.ಪಿಗೆ ಜೀವ ತುಂಬುವವರ್ಯಾರು? ಹೀಗೊಂದು ಪ್ರಶ್ನೆ ಮೂಡಿರುವುದು ಹಲವು ವರ್ಷಗಳಿಂದ ಬಂಟ್ವಾಳದ ಪಕ್ಷದ ಕಾರ್ಯಕರ್ತರಲ್ಲಿ . ಹೀಗ ಮತ್ತೆ ಈ ಮಾತು ಚಿಗುರೊಡೆದ್ದು ಯಾಕೆ ಅಂದರೆ ? ಅದಕ್ಕೂ ಬಲವಾದ ಕಾರಣ ವಿದೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಬಿಜೆಪಿಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಇನ್ನುಳಿದಿರುವುದು ವಿಧಾನಸಭಾ ಕ್ಷೇತ್ರ ಸಮಿತಿಗೆ ಅಧ್ಯಕ್ಷರ ಆಯ್ಕೆ. ಈ ಆಯ್ಕೆ ಬಂಟ್ವಾಳದ ಬಿ.ಜೆ.ಪಿಗೆ ನಿರ್ಣಯಕವಾಗಲಿದೆಯೇ ಎನ್ನುವುದು ಪ್ರಮುಖವಾಗಿರುವುದು. ಇತ್ತೀಚಿನ ವರ್ಷಗಳಿಂದ ಬಂಟ್ವಾಳದ ಬಿಜೆಪಿಯ ಸಾಧನೆಯನ್ನು ನೋಡಿದರೆ ಅವರಿಗೆ ಸಮರ್ಥ ನಾಯಕನನ್ನು ಆರಿಸುವಲ್ಲಿ ವಿಫಲವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಉಸ್ತುವಾರಿ ಸಚಿವರ ತವರಲ್ಲಿ ಪ್ರಬಲ ವಿರೋದಪಕ್ಷವಾಗಿ ಮೂಡಿಬರಬೇಕಾದ ಬಿ.ಜೆ.ಪಿ. ಬಂಟ್ವಾಳದಲ್ಲಿ ಬಾಲಮಡಚಿ ಕುಳಿತುಕೊಂಡಿದೆ ಎಂಬ ಸತ್ಯ ಕಾರ್ಯಕರ್ತರ ಉತ್ಸಾಹವನ್ನು ಇನ್ನಷ್ಟು ಕುಗ್ಗಿಸಿದೆ. ಹಾಗಾಗಿಯೇ ಈಗ ಬಿಜೆಪಿಗೆ ಬೇಕಾಗಿರುವುದು ಕ್ರಿಯಾಶೀಲ, ಸಮರ್ಥ ನಾಯಕತ್ವ. ಎಲ್ಲರನ್ನೂ ಒಂದುಗೂಡಿಸಿ, ಪಕ್ಷವನ್ನು ಬಲಿಷ್ಠಗೊಳಿಸುವ, ಸಂಘಟನಾ ಸಾಮಥ್ರ್ಯವಿರುವ ಪೂರ್ಣಾವಧಿಯ ರಾಜಕಾರಣ ಮಾಡಲು ಸಮಯವಿರುವ ಸಜ್ಜನ ನಾಯಕನನ್ನು ಆರಿಸುವುದು ಪಕ್ಷದ ಮುಂದಿರುವ ಸವಾಲು. ನಾಗರಾಜ ಶೆಟ್ಟಿ ಬಂಟ್ವಾಳದ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಸಾಕಷ್ಟು ಗಟ್ಟಿಗೊಳಿಸಿದ್ದು ಅಲ್ಲದೆ ಆ ಬಾರಿ ಅವರೇ ಬಂಟ್ವಾಳದಲ್ಲಿ ಶಾಸಕರಾಗಿ ಆರಿಸಿ ಬಂದಿದ್ದಾರೆ. ಅದಕ್ಕೆ ಹಿಂದೆ ಮತ್ತು ಮುಂದೆ ಯಾರಿಂದಲೂ ಹುದ್ದೆಯಲ್ಲಿ ಸಮರ್ಥವಾಗಿ ಪ್ರಬಲವಾಗಿ ಸಂಘಟನಾತ್ಮಕವಾಗಿ ಕಟ್ಟಿ ವಿರೋದ ಪಕ್ಷಕ್ಕೆ ಸವಾಲು ನೀಡಲು ವಿಫಲವಾಗಿದೆ.
ಕಳೆದ ಜಿಲ್ಲಾ ಪಂಚಾಯತು, ತಾಲೂಕು ಪಂಚಾಯತು ಚುನಾವಣೆಯಲ್ಲೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಕಂಡಿದೆ. ಈ ಚುನಾವಣೆಯ ಮೂಲಕ ಬಿಜೆಪಿಯ ಬಲಿಷ್ಠ ನಾಯಕರು ಸೋಲನುಭವಿಸಿ ಮೂಲೆಗುಂಪಾಗಿರುವುದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ..ಇದನ್ನೆಲ್ಲಾ ಸರಿದೂಗಿಸಿಕೊಂಡು ಬಂಟ್ವಾಳದಲ್ಲೂ ಸಮರ್ಥ ವಿರೋಧ ಪಕ್ಷವೊಂದು ಇದೆ ಎಂದು ನಾಗರಿಕ ವಲಯದಲ್ಲಿ ತಮ್ಮ ಅಸ್ಥಿತ್ವವನ್ನು ಗಟ್ಟಿಗೊಳಿಸುವುದು ಬಿಜೆಪಿಗೆ ಈಗ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಯ ಆಯ್ಕೆಗಾಗಿ ಬಿಜೆಪಿ ನಾಯಕರ ವಲಯದಲ್ಲಿ ಚರ್ಚೆ , ಮನವೊಲಿಸುವ ಪ್ರಯತ್ನ, ಒತ್ತಾಯ, ಒತ್ತಡದ ಕಸರತ್ತುಗಳು ನಡೆಯುತ್ತಿದೆ.
ಬಿಜೆಪಿಗೆ ಅಧ್ಯಕ್ಷರ್ಯಾರು? ಪಕ್ಷವನ್ನು ಬಲಿಷ್ಠವಾಗಿ ತಳಮಟ್ಟದಲ್ಲಿ ಕಟ್ಟುವವರ್ಯಾರು? ಬಿಜೆಪಿಯೊಳಗಿರುವ ಗುಂಪುಗಾರಿಕೆಯನ್ನು ಸರಿ ಮಾಡುವವರ್ಯಾರು? ಮೊದಲಾದ ಪ್ರಶ್ನೆಗಳು ಎದುರಾಗುವ ಬೆನ್ನಲ್ಲೇ ಕೆಲವರ ಹೆಸರೂಗಳು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ. ಬಿಜೆಪಿ ನಾಯಕರೆನಿಸಿಕೊಂಡವರು ಬಾಯಿ ಬಿಡದಿದ್ದರೂ, ಎಲ್ಲರೂ ಸೇರಿ ಸಮರ್ಥನೊಬ್ಬನನ್ನು ಆಯ್ಕೆ ಮಾಡಲು ಸಿದ್ಧರಿಲ್ಲದಿದ್ದರೂ, ಸಿದ್ಧರಿದ್ದರೂ ಅದಕ್ಕೆ ಅವಕಾಶವಿಲ್ಲದೆ ನೇರವಾಗಿ ಹೈಕಮಾಂಡೇ ಅಧ್ಯಕ್ಷರನ್ನು ನೇಮಿಸಿದರೂ ಪಕ್ಷದ ಉತ್ಸಾಹಿ ಕಾರ್ಯಕರ್ತರು ಬಯಸುವುದು ಕಾರ್ಯಕರ್ತರ ಬಹುಮತದ ಅಭ್ಯರ್ಥಿಯೇ ಅಧ್ಯಕ್ಷರಾಗಿ ಆಯ್ಕೆಯಾಗಬೇಕು ಎಂದು. ಯಾಕೆಂದರೆ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟುವವರು, ಮತ ಕೇಳುವವರು, ಜನರ ಸಮಸ್ಯೆಗಳಿಗೆ ಸ್ಪಂಧಿಸುವವರು, ಜನರ ಕೆಟ್ಟ ಮಾತುಗಳನ್ನು ಕೇಳುವವರು ಕಾರ್ಯಕರ್ತರು. ಅದ್ದರಿಂದ ಕಾರ್ಯಕರ್ತರು ಸೂಚಿಸುವವರೇ ಅಧ್ಯಕ್ಷರಾಗಬೇಕು ವಿನಃ ಯಾರೋ ಎಲ್ಲಿಯೋ ಕುಳಿತು ಅಧ್ಯಕ್ಷರನ್ನು ಆಯ್ಕೆ ಮಾಡುವುದು ಸರಿಯಲ್ಲ ಎನ್ನುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯ. ಆದರೆ ಪಕ್ಷದಲ್ಲಿ ಕಾರ್ಯಕರ್ತರ ಮಾತಿಗೆ ಎಷ್ಟರಮಟ್ಟಿಗೆ ಬೆಲೆ ಸಿಗಲಿದೆ ಎಂದು ಕಾದು ನೋಡಬೇಕಷ್ಠೆ.
ಪ್ರಸ್ತುತ ಜಿ.ಆನಂದ ಅಧ್ಯಕ್ಷರಾಗಿ ಪಕ್ಷವನ್ನು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಮುನ್ನಡೆಸಿದ್ದಾರೆ. ಆದರೆ ಪ್ರಬಲ ವಿರೋಧ ಪಕ್ಷವಾಗಿ ಮೂಡಿಬರುವಲ್ಲಿ, ಕಾಂಗ್ರೇಸ್ಸನ್ನು ಸಮರ್ಥವಾಗಿ ಎದುರಿಸುವಲ್ಲಿ ಪಕ್ಷ ವಿಫಲವಾಗಿದೆ ಎನ್ನುವುದು ಕಾರ್ಯಕರ್ತರ ಕೊರಗು. ಮುಂದಿನ ಸಾಲಿಗೆ ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಗೆ ಅಧ್ಯಕ್ಷರಾಗಲು ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಎ.ಗೋವಿಂದ ಪ್ರಭು ಮೊದಲಾದ ಹಿರಿಯರ ಹೆಸರುಗಳು ಒಂದೆಡೆ ಕೇಳಿ ಬರುತ್ತಿದ್ದರೆ,ದೇವದಾಸ ಶೆಟ್ಟಿ , ಯಶವಂತ ದೇರಾಜೆ, ಬಿ.ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಹರೀಶ್ವಂದ್ರ ಪೂಜಾರಿ ಕಜೆಕಾರು ಮೊದಲಾದ ಯುವ ನಾಯಕರ ಹೆಸರೂಗಳು ಚಾಲ್ತಿಯಲ್ಲಿದೆ. ಪಕ್ಷದ ಅಧ್ಯಕ್ಷ ಪೀಠ ಎಂದಾಕ್ಷಣ ಅದು ನಗರ ನಿವಾಸಿಗಳಿಗಷ್ಟೇ ಸೀಮಿತವಾಗಬಾರದು, ಗ್ರಾಮೀಣ ಪ್ರದೇಶದಲ್ಲಿರುವ ಅರ್ಹ ಕ್ರಿಯಾಶೀಲ ನಾಯಕರಿಗೂ ಅವಕಾಶ ಸಿಗಬೇಕೆಂದು ಕಾರ್ಯಕರ್ತರೇ ಆಗ್ರಹಿಸುತ್ತಿದ್ದಾರೆ.
ಎ.ರುಕ್ಮಯ ಪೂಜಾರಿ ಅವರು ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಬೇಕೆಂದು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕಾರ್ಯಕರ್ತರು ಅಭಿಪ್ರಾಯಿಸುತ್ತಿದ್ದರೂ ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು, ರಾಜ್ಯ ಘಟಕದ ಉಪಾಧ್ಯಕ್ಷರಾಗಿರುವ ಅವರು ಮತ್ತೆ ಕ್ಷೇತ್ರ ಸಮಿತಿಗೆ ಬರುವರೇ ಎಂಬ ಪ್ರಶ್ನೆಯೂ ಕೆಲವರನ್ನು ಕಾಡುತ್ತಿದೆ. ಮಾಜಿ ಶಾಸಕರಾದ, ಈಗಾಗಲೇ ಜಿಲ್ಲಾಧ್ಯಕ್ಷರಾಗಿರುವ ಪದ್ಮನಾಭ ಕೊಟ್ಟಾರಿ ಅವರು ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದೆ ಹಿರಿಯರು, ಅನುಭವಿಗಳ ಪೈಕಿ ಎದ್ದು ಕಾಣುವುದು ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮತ್ತು ಎ.ಗೋವಿಂದ ಪ್ರಭು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದರೂ ದೃತಿಗೆಡದೆ ಕ್ಷೇತ್ರವಿಡೀ ಸಂಚರಿಸಿ, ಕಾರ್ಯಕರ್ತರನ್ನು ಹುರುದುಂಬಿಸಿ, ಪಕ್ಷಕ್ಕಾಗಿ ಎಲ್ಲಾ ರೀತಿಯಲ್ಲೂ ತ್ಯಾಗ ಮಾಡಿದ-ಮಾಡುತ್ತಿರುವ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರೇ ಪಕ್ಷದ ಈಗಿನ ಸ್ಥಿತಿಯಲ್ಲಿ ಅಧ್ಯಕ್ಷರಾಗಲು ಸರ್ವಸಮ್ಮತ ವ್ಯಕ್ತಿ-ಅವರೇ ಅಧ್ಯಕ್ಷರಾಗಬೇಕೆನ್ನುವುದು ಬಹುತೇಕ ಕಾರ್ಯಕರ್ತರ ಒತ್ತಾಯ. ಸಧ್ಯಕ್ಕೆ ಅವರು ಅಧ್ಯಕ್ಷರಾಗಲು ಒಪ್ಪುತ್ತಿಲ್ಲ ಎನ್ನುವ ಮಾತು ಅವರ ಆಪ್ತ ವಲಯದಿಂದಲೇ ಕೇಳಿ ಬರುತ್ತಿರುವ ಬೆನ್ನಲ್ಲೇ, ಮುಂದೆ ಅವರೇ ಎಂ.ಎಲ್.ಎ.ಕ್ಯಾಂಡಿಯೇಟ್, ಅದ್ದರಿಂದ ಈಗ ಅವರೇ ಅಧ್ಯಕ್ಷರಾದರೆ ಪಕ್ಷ ಬಲಗೊಳ್ಳಲು ಸಾಧ್ಯವಿದೆ ಎನ್ನುವುದು ಪಕ್ಷದ ಎರಡನೇ ಹಂತದ ನಾಯಕರ ಅಭಿಮತ. ಸುದೀರ್ಘ ಕಾಲದಿಂದ ಪುರಸಭಾ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿರುವ ಎ.ಗೋವಿಂದ ಪ್ರಭು ಅವರೂ ಅಧ್ಯಕ್ಷರಾಗಲು ಅರ್ಹರು ಎನ್ನುತ್ತಾರೆ ಪಕ್ಷದ ಕೆಲ ಹಿರಿಯ ಕಾರ್ಯಕರ್ತರು. ಇವೆಲ್ಲವೂ ಅಸಾಧ್ಯವಾದಾಗ ಕಾಣುವುದು ಯುವ, ಉತ್ಸಾಹಿ, ಕ್ರಿಯಾಶೀಲ ಹೊಸ ಮುಖಗಳು. ಸಧ್ಯದ ಪಕ್ಷದ ಮುಂದಿರುವ ಸವಾಲನ್ನು ಎದುರಿಸಲು ಬಿಸಿರಕ್ತದ ಯುವ ನಾಯಕರೇ ಬೇಕು ಎನ್ನುವುದು ಬಹುತೇಕ ಯುವ ಕಾರ್ಯಕರ್ತರ ಬೇಡಿಕೆ. ತಾಲೂಕು ಪಂಚಾಯತು ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಪುರಸಭಾ ಮಾಜಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಹೆಸರುಗಳು ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು ಉಳಿದಂತೆ ದೇವದಾಸ್ ಶೆಟ್ಟಿ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್ ಅವರ ಹೆಸರುಗಳು ಕೇಳಿ ಬರುತ್ತಿದ್ದರೂ ಅವರಿರ್ವರೂ ಈಗಾಗಲೇ ಒಮ್ಮೆ ಅಧ್ಯಕ್ಷರಾದವರು-ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚು ಎನ್ನುವ ಮಾತುಗಳು ಕೇಳಿ ಬರುತ್ತಿದೆ ಬಿಜೆಪಿ ವಲಯದಿಂದ.
ಕಳೆದ ಅವಧಿಯಲ್ಲಿ ಇಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಏನೂ ಮಾಡಿಲ್ಲ. ಕ್ಷುಲಕ ವಿಚಾರಗಳಿಗೆ ಮನವಿ ಅರ್ಪಣೆ, ಪ್ರತಿಭಟನೆ ನಡೆಸಿದ್ದು ಬಿಟ್ಟರೆ ಪರಿಣಾಮಕಾರಿಯಾದ ವಿಚಾರಗಳನ್ನೆತ್ತಿ ಗಂಭೀರವಾಗಿ ಗಮನ ಸೆಳೆದಿಲ್ಲ. ನಿಜಕ್ಕೂ ವಿರೋಧ ಪಕ್ಷವಾಗಿ ಗಮನಾರ್ಹವಾಗಿ ಗುರುತಿಸಿಕೊಳ್ಳುವಂತಹ, ಆ ಮೂಲಕ ಜನರ ಹತ್ತಿರವಾಗುವಂತಹ ವಸ್ತು-ವಿಷಯ-ಘಟನೆಗಳಿಗೆ ಕ್ಷೇತ್ರದಲ್ಲಿ ಬರವಿರಲಲ್ಲ. ಮುಂಬರುವ ವಿಧಾನ ಸಭಾ ಚುನಾವಣೆಯ ದೃಷ್ಟಿಕೋನದಲ್ಲಿ ಈ ಬಾರಿಯ ಅಧ್ಯಕ್ಷರ ಆಯ್ಕೆ ನಡೆಯುತ್ತದೆ ಎಂಬುವುದು ಕಾರ್ಯಕರ್ತರ ಮಾತು. ಇಷ್ಟಕ್ಕೂ ಕಾರ್ಯಕರ್ತರ ಮಾತಿಗೆ ಬೆಲೆ ನೀಡಿ ಈ ಆಯ್ಕೆ ನಡೆಯುತ್ತದಾ ಅಥವಾ ಹೈಕಮಾಂಡ್ ಅವರ ಸೂಚನೆಯಂತೆ ಜಿಲ್ಲಾಧ್ಯಕ್ಷರ ನೇಮಕವಾದಂತೆ ಬಂಟ್ವಾಳದಲ್ಲೂ ಹ್ಯಕಮಾಂಡ್ ನಿರ್ಣಯ ಅಂತಿಮವಾಗುತ್ತದೋ ಎನ್ನುವುದು ಮುಂದಿರುವ ವಿಚಾರ. ಕಾರ್ಯಕರ್ತರಿಗೆ ಇಲ್ಲಿ ಬೆಲೆ ನೀಡುತ್ತಿಲ್ಲ. ಪಕ್ಷಕ್ಕಾಗಿ ಹಗಲಿರುಳು ಬೆವರು ಸುರಿಸಿ ದುಡಿದವರನ್ನು ಮೂಲೆಗುಂಪು ಮಾಡಲಾಗಿದೆ ಅವರಿಗೆ ಸರಿಯಾದ ಮಾನ್ಯತೆ ನೀಡುತ್ತಿಲ್ಲ . ಅವರ ಮಾತು ಕೇಳುತ್ತಿಲ್ಲ . ಬಿಜೆಪಿಯೊಳಗೆ ಎರಡು ಗುಂಪು ಮುಸುಕಿನಲ್ಲಿ ಗುದ್ದಾಟ ನಡೆಯುತ್ತದೆ ಹಾಗಾಗಿ ಇಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸುವ ಬದಲು ಸ್ವಪ್ರತಿಷ್ಟೆಗಾಗಿ ಇತರರ ಕಾಲು ಎಳೆಯುವ ಕೆಲಸ ಮಾಡಲಾಗುತ್ತದೆ ಎಂದು ಕಾರ್ಯಕರ್ತರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ಬಿ.ಜೆ.ಪಿ ಪಕ್ಷದಲ್ಲಿ ತಳಮಟ್ಟದಲ್ಲಿ ಬೆಳೆದು ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ನಾಯಕತ್ವವನ್ನು ನೀಡಬೇಕು . ಜಿಲ್ಲೆಯ ಬಿ.ಜೆಪಿ ತನ್ನ ತೆಕ್ಕೆಯೊಳಗೆ ಇರಬೇಕು ಎನ್ನುವ ಆಹಂ ನ್ನು ಬಿಟ್ಟು ಗೆಲುವಿಗಾಗಿ ಪಣತೊಟ್ಟು ಪಕ್ಷವನ್ನು ಕಟ್ಟಿ ಎಂದು ಕಾರ್ಯಕರ್ತರ ಆಶಾಭಾವನೆ.
