ನವದೆಹಲಿ:ನಿತಿನ್ ಗಡ್ಕರಿ ವಿರುದ್ಧ ನೀಡಿದ್ದ ಹೇಳಿಕೆಯನ್ನ ಹಿಂಪಡೆದು ರಾಜಿ ಮಾಡಿಕೊಳ್ಳುವಂತೆ ಕೋರ್ಟ್ ಬುದ್ಧಿ ಹೇಳಿದರೂ ಕೇಜ್ರಿವಾಲ್ ತಮ್ಮ ಹಠ ಸಾಧಿಸಿದ್ದಾರೆ. ಇದರಿಂದ ಬೇರೆ ದಾರಿ ಇಲ್ಲದೇ ದೆಹಲಿ ಕೋರ್ಟ್ ಕೇಜ್ರಿವಾಲ್ ವಿರುದ್ಧ ಆರೋಪ ದಾಖಲಿಸಿಕೊಳ್ಳಲು ನಿರ್ಧರಿಸಿದೆ. ನಿತಿನ್ ಗಡ್ಕರಿ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ಕೋರ್ಟ್ ಆರೋಪ ದಾಖಲಿಸಿಕೊಂಡಿದೆ. ನಿತಿನ್ ಗಡ್ಕರಿ ಭ್ರಷ್ಟಾಚಾರ ಎಸಗಿರುವುದಕ್ಕೆ ತನ್ನ ಬಳಿ ಸಾಕ್ಷ್ಯಾಧಾರ ಇರುವುದರಿಂದ ಅವರ ವಿರುದ್ಧದ ಹೇಳಿಕೆಯನ್ನು ಹಿಂಪಡೆದುಕೊಳ್ಳುವುದಿಲ್ಲ ಎಂದು ಕೋರ್ಟ್’ನಲ್ಲಿ ಕೇಜ್ರಿವಾಲ್ ವಾದಿಸಿದ್ದರು.

ಇಂದು ನಡೆದ ವಿಚಾರಣೆಯಲ್ಲಿ ದೆಹಲಿ ಕೋರ್ಟ್ ನ್ಯಾಯಮೂರ್ತಿ ಗೋಮತಿ ಮನೋಚಾ ಆಮ್ ಆದ್ಮಿ ಮುಖ್ಯಸ್ಥರಿಗೆ ಸಾಕಷ್ಟು ತಿಳಿಹೇಳಲು ಯತ್ನಿಸಿದ್ದರು. “ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ ಮಾಧ್ಯಮಗಳಲ್ಲಿ ಯಾಕೆ ಆರೋಪ ಮಾಡುವ ಗೋಜಿಗೆ ಹೋಗುತ್ತೀರಿ..? ಇಬ್ಬರೂ ಕೂಡ ರಾಜಕಾರಣಿಗಳೇ ಆಗಿದ್ದು, ನಿಮ್ಮಗಳ ಮಧ್ಯ ಇರುವ ವಿವಾದವನ್ನ ಶಮನ ಮಾಡಿಕೊಂಡು ನಿಮ್ಮ ಶ್ರಮವನ್ನ ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ” ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶೆ ಗೋಮತಿ ಮನೋಚಾ ಇಬ್ಬರಿಗೂ ತಿಳಿಹೇಳಿದರು.
ಕೇಜ್ರಿವಾಲ್ ತಮ್ಮ ಆರೋಪವನ್ನ ಹಿಂತೆಗೆದುಕೊಂಡರೆ ತಾನು ಅವರ ವಿರುದ್ಧದ ಮೊಕದ್ದಮೆಯನ್ನ ಹಿಂಪಡೆದುಕೊಳ್ಳಲು ಸಿದ್ಧವಿರುವುದಾಗಿ ನ್ಯಾಯಾಲಯಕ್ಕೆ ನಿತಿನ್ ಗಡ್ಕರಿ ಹೇಳಿದರು. ಆದರೆ, ಕೇಜ್ರಿವಾಲ್ ತಮ್ಮ ಆರೋಪವನ್ನ ಹಿಂಪಡೆದುಕೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಬೇರೆ ದಾರಿ ಇಲ್ಲದೇ ಕೇಜ್ರಿವಾಲ್ ವಿರುದ್ಧ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿತು. ಒಂದು ವೇಳೆ, ಕೇಜ್ರಿವಾಲ್ ತಮ್ಮ ಆರೋಪವನ್ನ ಸಾಬೀತು ಮಾಡಲು ಸಾಧ್ಯವಾಗದೇ ಹೋದಲ್ಲಿ ಎರಡು ವರ್ಷವಾದರೂ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
