ಕೈಕಂಬ : ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2016-17 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ತೋರಣ- 2016’ ಪ್ರಾರಂಭೋತ್ಸವ ಮತ್ತು ಮಾಹಿತಿ ಕಾರ್ಯಾಗಾರ ಜೂನ್ 13 ರಂದು ಜರಗಿತು. ಕಾಲೇಜಿನ ಪ್ರಾಂಶುಪಾಲ ವಾಸುದೇವ ಕಾಮತ್ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ‘ವಿದ್ಯಾರ್ಥಿಗಳು ತಮಗೊದಗಿದ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಛಲ ಮತ್ತು ಸಾಧನೆಯಿಂದ ಮುಂದೆ ಬಂದರೆ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದರು. ಹಿರಿಯ ಉಪನ್ಯಾಸಕಿ ಅನುಸೂಯ ಕೆ.ಪಿ. ಕಾಲೇಜಿನಲ್ಲಿರುವ ಪ್ರಚಲಿತ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯಶಾಸ್ತ್ರ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ವಿದ್ಯಾರ್ಜನೆಯ ವಿವಿಧ ಹಂತಗಳಲ್ಲಿ ಶಿಕ್ಷಣ ಸಂಸ್ಥೆಗಳ ಬದಲಾವಣೆ ಸಹಜ. ಆದರೆ ಅಲ್ಲಿ ಪದಾರ್ಪಣೆ ಮಾಡುವಾಗಲೇ ಅಲ್ಲಿರುವ ಶೈಕ್ಷಣಿಕ ವಾತಾವರಣ ಮತ್ತು ವಿಭಿನ್ನ ಸವಲತ್ತುಗಳ ಬಗ್ಗೆ ಮಕ್ಕಳಿಗೆ ಸ್ಪಷ್ಟ ಚಿತ್ರಣ ನೀಡುವ ಅಗತ್ಯವಿದೆ. ‘ತೋರಣ-2016 ‘ ಕಾರ್ಯಕ್ರಮ ಈ ನಿಟ್ಟಿನಲ್ಲಿ ವಿಶಿಷ್ಟ ಪರಿಕಲ್ಪನೆಯೊಂದಿಗೆ ಸಂಯೋಜಿಸಲ್ಪಟ್ಟಿದೆ’ ಎಂದರು. ಕನ್ನಡ ಉಪನ್ಯಾಸಕಿ ಸುಮನಾ ಹೆಚ್.ಸಿ. ಸಂಸ್ಥೆಯ ನಿಯಮಾವಳಿ ಮತ್ತು ಪರೀಕ್ಷೆಯ ಕುರಿತು ಮಾಹಿತಿಯಿತ್ತರು. ವಿದ್ಯಾರ್ಥಿ -ವಿದ್ಯಾರ್ಥಿನಿಯರನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ಪರಸ್ಪರ ಪರಿಚಯಿಸಲಾಯಿತು. ಗುಂಪಿನ ನಾಯಕರ ಮೂಲಕ ವೈಯಕ್ತಿಕ ಸಮಸ್ಯೆ ಮತ್ತು ನಿರೀಕ್ಷೆಗಳನ್ನು ಸಂಗ್ರಹಿಸಿ ಮಾರ್ಗದರ್ಶನ ನೀಡಲಾಯಿತು.
ಉಪನ್ಯಾಸಕರಾದ ಕೇಶವ ಪೂಜಾರಿ, ಬಾಲಕೃಷ್ಣ ಡಿ ಮತ್ತು ಹರಿಣಾಕ್ಷಿ ಬಿ ಪ್ರಸ್ತುತ ಸಂಸ್ಥೆಯಲ್ಲಿರುವ ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗಗಳನ್ನು ಪರಿಚಯಿಸಿ ಅವುಗಳ ಉಪಯೋಗವನ್ನು ವಿವರಿಸಿದರು. ಆಂಗ್ಲ ಉಪನ್ಯಾಸಕಿ ವಯೋಲಾ ಸಿಕ್ವೇರ ಕೆಲವು ಮೋಜಿನ ಆಟಗಳನ್ನು ನಡೆಸಿಕೊಟ್ಟರು. ರಸಾಯನಶಾಸ್ತ್ರ ಉಪನ್ಯಾಸಕ ಗಿರೀಶ ಎಂ. ‘ಪ್ರೇರಣಾ ‘ ಸಾಕ್ಷ್ಯಚಿತ್ರವನ್ನು ಪ್ರದಶರ್ಿಸಿದರು. ಶ್ರೀದೇವಿ ಸಹಕರಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕ ಅಹಮದ್ ಹುಸೇನ್ ಶಾಫಿಕ್ ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕಿ ವೇದ ಎಂ. ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
