ಬಂಟ್ವಾಳ: ಸರಕಾರಿ ಇಲಾಖಾ ಅರ್ಜಿಗಳಿಗೆ ಮೊಬೈಲ್ ನಂಬರ್ ಕಡ್ಡಾಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಮೊಬೈಲ್ ಖರೀದಿಸಲು ಪ್ರೇರಪಣೆ ಮಾಡುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ಆಹಾರ ಸಚಿವ ಹಾಗೂ ಮುಖ್ಯಮಂತ್ರಿಗೆ ದೂರು ನೀಡಲು ಮುಂದಾಗಿದ್ದಾರೆ.
ಪಾಣೆಮಂಗಳೂರು ಹೋಬಳಿಯ ಕಂದಾಯ ಇಲಾಖೆಯ ಆಹಾರ ವ್ಯವಸ್ಥೆಗೆ ಸಂಬಂಧಪಟ್ಟಂತೆ ಸ್ವೀಕರಿಸುವ ಎಲ್ಲ ಅರ್ಜಿಗಳಿಗೂ ಮೊಬೈಲ್ ಸಂಖ್ಯೆ ಕಡ್ಡಾಯ. ಮೊಬೈಲ್ ಸಂಖ್ಯೆ ಇಲ್ಲದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಇಲಾಖೆಯು ತಾಲೂಕು ಪಂಚಾಯಿತಿಯಲ್ಲಿ ನೋಟೀಸ್ ಹಾಕಿದೆ.
ಒಂದೆಡೆ ಬಡವರಿಗೆ ಎಲ್ಲ ಸೌಲಭ್ಯ ಸಿಗಬೇಕೆಂದು ಸರಕಾರವೇ ಹೇಳುತ್ತದೆ. ಬಡವರಿಗೆ ಮೊಬೈಲ್ ಇದೆಯೇ? ಮೊಬೈಲ್ ಇಲ್ಲದವರು ಪಡಿತರ ಚೀಟಿಗಾಗಿ ಮೊಬೈಲ್ ಖರೀದಿಸುವ ಪರಿಸ್ಥಿತಿ ಬಂದಿದೆ. ಹೊಟ್ಟೆಗಿಲ್ಲದೇ ಇದ್ದರೂ ಕೈಯಲ್ಲಿ ಮೊಬೈಲ್ ಹಿಡಿದು ಶೋಕಿಮಾಡಬೇಕೆಂಬಂತಾಗಿದೆ . ಮೊಬೈಲ್ ಇಲ್ಲದವರು ಪಡಿತರ ಚೀಟಿ ಹೊಂದಲು ಅರ್ಹರಲ್ಲ ಎಂಬ ಸೂಚನೆಗಳು ಸರಕಾರಿ ಇಲಾಖೆಗಳಲ್ಲಿ ಗೋಚರಿಸಲ್ಪಡುತ್ತವೆ. ಇದು ಸಂವಿದಾನದಲ್ಲಿರುವ ನಾಗರೀಕನ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ. ಸರಕಾರದ ಈ ಧೋರಣೆಗೆ ವಿರೋಧವಿದೆ ಎಂದು ಅವರು ಹೇಳಿದ್ದಾರೆ.
{ಮೊಬೈಲ್ ಕಡ್ಡಾಯ ಎಂಬ ರೀತಿಯಲ್ಲಿ ಎಲ್ಲೂ ಹೇಳಿಲ್ಲ. ಅಜರ್ಿಯನ್ನು ಸ್ವೀಕರಿಸುದಿಲ್ಲವೆಂಬಂತೆ ಹೇಳುವುದೂ ಇಲ್ಲ. ಎಲ್ಲಾದರೂ ಹಾಗೆ ಹಾಕಿದಲ್ಲಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.}
ಎ ಬಿ ಇಬ್ರಾಹಿಂ
ದ ಕ ಜಿಲ್ಲಾಧಿಕಾರಿ .
