ಉಳ್ಳಾಲ: ಕಸ್ತುರ್ಭಾ ಹಾಸ್ಪಿಟಲ್ ಮತ್ತು ಕೆ.ಎಂ.ಸಿ ಮಣಿಪಾಲ ಯುನಿವರ್ಸಿಟಿ ಇದರ ವಿವಿಧ ವಿಭಾಗಗಳ ತಜ್ಞರುಗಳಿಂದ ಹಿರಿಯಡಕದ ಮಾಧವ ಮಂಗಲ ಸಭಾ ಭವನದಲ್ಲಿ ಸಾರ್ವಜನಿಕರಿಗೆ ಭಾನುವಾರ ಜೂನ್ 5, ರಂದು ನೇತ್ರ, ಹೃದಯ, ಮಧುಮೇಹ, ಮಧುಮೇಹಿ ಕಾಲುಗಳ ಪರೀಕ್ಷಾ ಶಿಬಿರ ಯಶಸ್ವಿಯಾಗಿ ಜರುಗಿತು. ಈ ಶಿಬಿರವನ್ನು ರೋಟರಿ ಕ್ಲಬ್ ಮಣಿಪಾಲ್ ಟೌನ್ (ಇದರ 80-ಪ್ರಾಜೆಕ್ಟ್ಸ್ಅಂಗವಾಗಿ), ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೆಬಲ್ ಟ್ರಸ್ಟ್, ಮೊಗವೀರ ಯುವ ಸಂಘಟನೆ – ಹಿರಿಯಡಕ ಘಟಕ, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ಬೆಳ್ಳಿ ಸಂಭ್ರಮದ ಅಂಗವಾಗಿ) ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಜಿಲ್ಲಾ ಕಾರ್ಯದರ್ಶಿ, ಈ ವರ್ಷದ ಆರ್ಯಭಟ ಪ್ರಶಸ್ತಿ ಪುರಸ್ಕೃತ ರೊ. ಬಾಲಕೃಷ್ಣ ಮದ್ದೋಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ಪದ್ಮರಾಜ ಹೆಗ್ಡೆ ಹಾಗು ಇತರ ಅತಿಥಿಗಳಾದ ಡಾ. ಟಾಮ್ ದೇವಸ್ಯ, ಡಾ. ಜಿ ಅರುಣ್ ಮಯ್ಯ, ಡಾ. ಚೈತ್ರ ಆರ್ ರಾವ್ ಇವರುಗಳು ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳುವ ಬಗ್ಗೆ ಮಾರ್ಗದರ್ಶನವನ್ನ ನೀಡಿದರು. ಸಭೆಯಲ್ಲಿ ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ನಟರಾಜ ಹೆಗ್ಡೆ, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ದಿವಾಕರ ಭಂಡಾರಿ, ನರ್ತಕಿ ಫ್ರೆಂಡ್ಸ್ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ, ಫಿಂಡ್ಲೆ ಯುನಿವರ್ಸಿಟಿಯ ಫ್ರೊಫೆಸರ್ ಡಾ. ಚಂದ್ರಶೇಖರ್ ಇವರುಗಳು ಉಪಸ್ಥಿತರಿದ್ದರು.
ಕು. ಶತಾ ಮತ್ತು ಕು. ಶ್ರೀನಿತಾ ಇವರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು, ಮೊಗವೀರ ಯುವ ಸಂಘಟನೆ – ಹಿರಿಯಡಕ ಘಟಕದ ಅಧ್ಯಕ್ಷ ಬಾಲಕೃಷ್ಣ ಬಿ ಕೆ ಸ್ವಾಗತಿಸಿ, ರೋಟರಿ ಕ್ಲಬ್ ಮಣಿಪಾಲ್ ಟೌನ್ನ ಕಾರ್ಯದರ್ಶಿ ಮತ್ತು ಶಿಬಿರದ ಸಂಯೋಜಕ ರಾಘವೇಂದ್ರ ಜಿ ವೈದ್ಯಕೀಯ ಶಿಬಿರದ ಉದ್ದೇಶವನ್ನು ವಿವರಿಸಿ, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕು. ಶ್ರಾವ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸುಮಾರು 200ಕ್ಕೂ ಹೆಚ್ಚು ಜನರು ಇದರ ಉಪಯೋಗವನ್ನು ಪಡೆದುಕೊಂಡರು. 137ಜನ ಮಧುಮೇಹ ಪರೀಕ್ಷೆ, 145 ಕ್ಕೂ ಮಿಕ್ಕಿ ನೇತ್ರ ಪರೀಕ್ಷೆ, ಸುಮಾರು 90 ಜನರು ಹೃದಯ ಪರೀಕ್ಷೆಯನ್ನು ಮಾಡಿಕೊಂಡರು. 45ಜನರು ಕನ್ನಡಕವನ್ನು ಅತಿ ಕಡಿಮೆದರದಲ್ಲಿ ಪಡೆದುಕೊಂದರೆ, 10 ಜನರಿಗೆ ಸಂಸ್ಥೆಯ ಪರವಾಗಿ ಉಚಿತವಾಗಿ ಒದಗಿಸಲಾಯಿತು. 62ಮಂದಿ ಉಚಿತ ಇ.ಸಿ.ಜಿ ಪ್ರಯೋಜನವನ್ನು ಪಡೆದುಕೊಂಡರು, 10 ಮಂದಿಗೆ ಕಸ್ತುರ್ಭಾ ಹಾಸ್ಪಿಟಲ್ ನಲ್ಲಿ ಉಚಿತ ನೇತ್ರ ಚಿಕಿತ್ಸೆಯ ಅವಕಾಶವನ್ನು ನೀಡಲಾಯಿತು.

