ಬಂಟ್ವಾಳ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ.ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾ.ಪಂ.ಸದಸ್ಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೆಲವೊಮ್ಮೆ ಅಧಿಕಾರಿಗಳು ಕಚೇರಿಯಲ್ಲಿಯೇ ಇರುವುದಿಲ್ಲ. ನೀವು ಸಂಬಳಕ್ಕೆ ದುಡಿಯುತ್ತೀರಾ? ಅಥವಾ ಗೌರವಧನಕ್ಕೆ ದುಡಿಯುತ್ತೀರಾ…? ಎಂದು ದಿನೆಶ್ ಅಮ್ಟೂರು ಪ್ರಶ್ನಸಿದರು.


ಚುನಾವಣೆಯ ಸಂದರ್ಭ ಮಾತ್ರ ಕೆಲಸ ಒತ್ತಡದಿಂದ ಕಚೇರಿಯಲ್ಲಿಯೇ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿಕೆ ನೀಡಿದರೂ ಸಮಾಧಾನಗೊಳ್ಳದಿದ್ದಾಗ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಆನಂದ ಶಂಭೂರು ಅಧಿಕಾರಿಗಳ ಬೆಂಬಲಕ್ಕೆ ನಿಂತು ಚುನಾವಣೆಯ ಸಂದರ್ಭ ಅಧಿಕಾರಿಗಳಿಗಿದ್ದ ಕರ್ತವ್ಯ ಒತ್ತಡದ ಬಗ್ಗೆ ಮನವರಿಕೆ ಮಾಡಿದರು.
ಟೋಲ್ಪ್ಲಾಜಾವನ್ನು ಬ್ರಹ್ಮರಕೂಟ್ಲುವಿನಿಂದ ಸ್ಥಳಾಂತರಿಸುವ ಬಗ್ಗೆ, ಏರಿಕೆಯಾಗಿರುವ ವಾಹನ ಸುಂಕವನ್ನು ಕಡಿಮೆಗೊಳಿಸುವ ಬಗ್ಗೆ, ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಧರಿಸಿತು. ಗ್ರಾಮಸಭೆಗಳಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಖಡ್ಡಾಯವಾಗಿ ಭಾಗವಹಿಸಬೇಕು, ಕೈಗೊಂಡ ನಿರ್ಣಯಗಳು ಅನುಷ್ಠಾನಗೊಳ್ಳ ಬೇಕು, ಸ್ಪಷ್ಟವಾದ ಮಾಹಿತಿ ಇರುವ ಅಧಿಕಾರಿಯನ್ನೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಮಂಗಳವಾರ ನಡೆದ ಅಡಿಕೆ ಕೊಳೆ ರೋಗ ವಿತರಣಾ ಕಾರ್ಯಕ್ರಮಕ್ಕೆ ಕೆಲವರು ಜಿ.ಪಂ.ಸದಸ್ಯರನ್ನು ಹಾಗೂ ತಾ.ಪಂ.ಅಧ್ಯಕ್ಷರನ್ನು ಆಹ್ವಾನಿಸಿಲ್ಲ ಎಂದು ಸಂತೋಷ್ ಕುಮಾರ್ ರೈ ಮತ್ತು ಮಾಧವ ಮಾವೆಯ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಕಾರ್ಯನಿರ್ವಾ ಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ ವೇದಿಕೆಯಲ್ಲಿದ್ದರು. ಸದಸ್ಯರಾದ ದಿನೇಶ್ ಅಮ್ಟೂರು, ಮಾಧವಮಾವೆ, ಐಡಾ ಸುರೇಶ್, ಶೈಲಜಾ ಶೆಟ್ಟಿ ಎಪ್ರಂ ಸಿಕ್ವೇರಾ, ಕಮಲಾಕ್ಷಿ, ಪಷ್ಪಲತಾ ಕರ್ಕೇರಾ, ಶಕುಂತಲಾ ಕುಲಾಲ್, ಲವಿನಾ ಡಿಸೋಜಾ ಜುಲಿಯಾನ ಲೋಬೋ ಚರ್ಚೆ ಯಲ್ಲಿ ಬಾಗವಹಿಸದ್ದರು.

