ಬಂಟ್ವಾಳ: ಅಭಿವೃದ್ದಿ ವಿಚಾರದಲ್ಲಿ ಪಕ್ಷಬೇಧ ಮರೆತು ಒಂದೇ ಮನಸ್ಸಿನಿಂದ , ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಂಟ್ವಾಳ ತಾಲೂಕು ಪಂಚಾಯತ್ ನ ನೂತನ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.
ಬಿ.ಸಿ.ರೋಡಿನ ಎಸ್ಜೆಎಸ್ಆರ್ ವೈ ಸಭಾಂಗಣದಲ್ಲಿ ಸೋಮವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ನ ನೂತನ ಆಡಳಿತದ ಪ್ರಥಮ ಸಭೆಯಲ್ಲಿ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಹಾಗೂ ಜಿಲ್ಲೆಯಲ್ಲಿ ಈ ಬಾರಿ ಹಿಂದೆಂದೂ ಬಾರದ ನೀರಿನ ಬರ ಉಂಟಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಉಂಟಾದ ನೀರ ಸಮಸ್ಯೆಗೆ ಗ್ರಾಮಪಂಚಾಯತ್ ಹಾಗೂ ತಾಲೂಕು ಆಡಳಿತ ಸೂಕ್ತ ಸ್ಪಂದನೆ ನೀಡಿದ್ದು, ತಾಲೂಕಿನ 74 ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂದವರು ಮಾಹಿತಿ ನೀಡಿದರು.

2
ಕಳೆದ ವಾರ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕು, ವೇಣೂರು ಪರಿಸರದಲ್ಲಿ ಹಾನಿಯಾಗಿದ್ದು, ಅದರಲ್ಲೂ ಬಂಟ್ವಾಳ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ಈಗಾಗಲೇ ಮೊದಲ ಹಂತದ ತಾತ್ಕಾಲಿಕ ಪರಿಹಾರವನ್ನು ಘಟನೆ ನಡೆದ ಮೂರೇ ದಿನದ ಒಳಗಾಗಿ ನೀಡಿರುವುದು ತಾಲೂಕಿನ ಇತಿಹಾಸದಲ್ಲಿ ಮೊದಲಾಗಿದೆ. ಉಳಿದಂತೆ ಹಂತ ಹಂತವಾಗಿ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಮೆಸ್ಕಾಂಗೆ ಸಂಬಂಧಿಸಿಯೂ ತಾಲೂಕಿನಲ್ಲಿ 500ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮರ ಬಿದ್ದು ತುಂಡಾಗಿವೆ. ಇದನ್ನು ಮೆಸ್ಕಾಂ ಇಲಾಖೆ ಸಮಾರೋಪಾದಿಯಲ್ಲಿ ದುರಸ್ಥಿ ಪಡಿಸುವ ಕಾರ್ಯವನ್ನು ನಡೆಸಿದೆ. ಆದರೆ ರಾಜಕೀಯ ಉದ್ದೇಶಕ್ಕಾಗಿ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಘಟನಾ ಸಂದರ್ಭದಲ್ಲಿ ತಾನು ಕ್ಷೇತ್ರದಲ್ಲಿ ಇಲ್ಲದಿದ್ದರೂ ಮಾಹಿತಿ ದೊರೆತ ತಕ್ಷಣ ಸಹಾಯಕ ಕಮಿಷನರ್ ಅವರನ್ನು ಸಂಪರ್ಕಿಸಿ ಪರಿಹಾರ ಕಾರ್ಯಕ್ಕೆ ಸೂಚಿಸಿದ್ದೆ. ಅವರು ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಒದಗಿಸುವ ಜಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ತಾನು ಫೋಟೋಕ್ಕೆ ಫೋಸ್ ಕೊಡುವ ಮತ್ತು ಉದಾಸಿನ ರಾಜಕಾರಣಿ ಅಲ್ಲ. ಜನಸಾಮಾನ್ಯರ ಜೊತೆಯಲ್ಲೇ ಇದ್ದು ಸಾಮಾಜಿಕ ಬದ್ಧತೆಯನ್ನು ತೋರ್ಪಡಿಸುವ ರಾಜಕಾರಣಿಯಾಗಿದ್ದೇನೆ ಎಂದು ಅವರು ತಮ್ಮ ವಿರುದ್ಧ ಬಂದ ವಿಪಕ್ಷಗಳ ಟೀಕೆಗೆ ಟಾಂಗ್ ನೀಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇ ರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ ವೇದಿಕೆಯಲ್ಲಿದ್ದರು. ಕಾರ್ಯನಿವಾಹಾಣ ಧಿಕಾರಿ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *