ಬಂಟ್ವಾಳ: ಜನಪರ ಕಾಳಜಿ ಹಾಗೂ ಇಚ್ಛಾಶಕ್ತಿ ಇದ್ದರೆ ಎಂತಹ ಅಭಿವೃದ್ದಿ ಕಾರ್ಯಗಳನ್ನು ಮಾಡಬಹುದು ಎನುವುದಕ್ಕೆ ದಿನೇಶ್‍ಅಮ್ಟೂರು ಅವರ ಜನಪರ ಕಾರ್ಯವೇ ಉದಾಹರಣೆ ಎಂದು ಮಾಜಿ ಶಾಸಕ ಕೆ. ಪದ್ಮಾನಾಭ ಕೊಟ್ಟಾರಿ ಪ್ರಶಂಸೆ ವ್ಯಕ್ತಪಡಿಸಿದರು.
ತಾ.ಪಂ.ಮಾಜಿ ಸದಸ್ಯ ದಿನೇಶ್ ಅಮ್ಟೂರು ಅವರು ತನ್ನ ತಾ.ಪಂ.ಅನುದಾನದಲ್ಲಿ ಅಮ್ಟೂರು ಗ್ರಾಮದ ಪೊಯ್ಯಕಂಡ ಎಂಬಲ್ಲಿ ಪಾಳುಬಿದ್ದಿದ್ದ ಸಾರ್ವಜನಿಕ ಬಾವಿಯನ್ನು ಪುನರ್ ನವೀಕರೀಸಿ ಮಂಗಳವಾರ ಸಂಜೆ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಲಾಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದ ಜನರಿಗೆ ಶಾಶ್ವತ ಹಾಗೂ ಶುದ್ದವಾದ ನೀರನ್ನು ಕೊಡುವ ಪ್ರಯತ್ನವನ್ನು ದಿನೇಶ್ ಅಮ್ಟೂರು ಮಾಡಿದ್ದಾರೆ ಎಂದ ಅವರು ಕೊಳವೆ ಬಾವಿ ಬಳಕೆಯಿಂದಾಗಿ ಸಾರ್ವಜನಿಕ ಬಾವಿಗಳು ನಾಶ ಹೊಂದಿದೆ ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯವರಾಗಿದ್ದಾಗ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಸಂದರ್ಭ ಗೋಳ್ತಮಜಲು ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಇಲ್ಲಿನ ಉಸ್ತುವಾರಿ ಸಚಿವರು ಗೋಳ್ತಮಜಲು ಯೋಜನೆಯನ್ನು ಜಾರಿಗೊಳಿಸಲು ಆಸಕ್ತಿ ತೋರುತ್ತಿಲ್ಲ ಎಂದು ಟೀಕಿಸಿದರು. ತಾಲೂಕಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಅರಿತುಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಪಾಣಾಜೆ ಬಾವಿಯಿಂದ ನೀರು ಎಳೆಯುವ ಮೂಲಕ ಬಾವಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಟ್ಟರು ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯ ಮಹಾಬಲ ಆಳ್ವ, ಜಿ.ಪಂ.ಮಾಜಿ ಸದಸ್ಯ ಚೆನ್ನಪ ಕೋಟ್ಯಾನ್, ಗೋಳ್ತಮಜಲು ಗ್ರಾ.ಪಂ.ಉಪಾದ್ಯಕ್ಷ ಮುಸ್ತಾಫ, ಪ್ರಮುಖರಾದ ಗೋಪಾಲ ಪೂಜಾರಿ, ಗೋಪಾಲಕೃಷ್ಣ ಪೂವಳ ಉಪಸ್ಥಿತರಿದ್ದರು.
ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ, ವಂದಿಸಿದರು.
