ಬಂಟ್ವಾಳ: ಗುರುವಾರ ರಾತ್ರಿ ಸುರಿದ ಮಳೆ,ಸಿಡಿಲು ಹಾಗೂ ಬೀಸಿದ ಬಿರುಗಾಳಿಯಿಂದ ಬಂಟ್ವಾಳ ತಾಲೂಕಿನ ಬಡಗಕಜೆಕಾರು,ಕಾವಳಮೂಡೂರು ಗ್ರಾಮಗಳಲ್ಲಿ ಮತ್ತು ಪುಂಜಾಲಕಟ್ಟೆ ಸಮೀಪದ ಕೋಡಿಯೇಲುನ ಮನೆಗಳಿಗೆ ಹಾನಿ ಸಂಭವಿಸಿದೆ.
ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಬರಮೇಲು ಪುತ್ತುಮೋನು ಅವರ ಮನೆಗೆ ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ.ಮನೆಯ ಹಂಚಿನ ಛಾವಣಿಗೆ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ಆದರೆ ಮನೆ ಮಂದಿಗೆ ಅಪಾಯವಾಗಿಲ್ಲ.
ತೆಂಕಕಜೆಕಾರು,ಕರ್ಲ ಶ್ರೀ ಕೃಷ್ಣ ದೇವಸ್ಥಾನಕ್ಕೆ ಸಿಡಿಲು ಬಡಿದು ವಿದ್ಯುತ್ ಮೀಟರ್ ಬೋರ್ಡ್ ಸುಟ್ಟು ಹೋಗಿದೆ.ದೇವಸ್ಥಾನದ ಒಂದು ಪಾಶ್ರ್ವದ ಗೋಡೆಗೆ ಬಡಿದ ಸಿಡಿಲು ಇನ್ನೊಂದು ಬದಿಯಲ್ಲಿ ಹೊರ ಹೋಗಿದೆ.ಕರ್ಲ ಕ್ವಾರ್ಟರ್ಸ್ ಅಮ್ಮು ಅವರ ಮನೆಗೆ ಸಿಡಿಲು ಬಡಿದು ಅವರ ಪುತ್ರ ಚೇತನ್‍ಗೆ ಸಿಡಿಲಿನಿಂದ ಆಘಾತವಾಗಿದೆ.ಪ್ರಜ್ಞಾಹೀನರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಮ್ಮು ಅವರ ಮನೆಗೆ ಹಾನಿಯಾಗಿದೆ. ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ , ಸದಸ್ಯ ಸುರೇಶ್ ಬಾರ್ದೊಟ್ಟು ಅವರು ಸ್ಥಳಕ್ಕಾಗಮಿಸಿ ಅ„ಕಾರಿಗಳಿಗೆ ಮಾಹಿತಿ ನೀಡಿದರು.
ಕಾವಳಮೂಡೂರು ಗ್ರಾಮದ ಕೊಂಚಾಡಿ ದರ್ಖಾಸು ಮನೆ ಸಂಜೀವ ಆಚಾರ್ಯ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕದ ಪರಿಕರಗಳು ಸುಟ್ಟು ಹೋಗಿದೆ.ಮನೆಯ ಗೋಡೆಗೆ ಹಾನಿಯಾಗಿದೆ.
ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಕೋಡಿಯೇಲು ಸವಿತಾ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.ಮನೆ ಮಂದಿ ಕುಟುಂಬಿಕರ ಮನೆಗೆ ಹೋಗಿದ್ದರಿಂದ ಅವರಿಗೆ ಯಾವುದೇ ಅಪಾಯವಾಗಿಲ್ಲ.ಮನೆಯ ಗೋಡೆ ಬಿರುಕು ಬಿಟ್ಟಿದ್ದು ಹೆಂಚಿನ ಛಾವಣಿಗೆ ಹಾನಿಯಾಗಿದೆ.ವಿದ್ಯುತ್ ಪರಿಕರಗಳು ಸುಟ್ಟು ಹೋಗಿದೆ.

ಬಡಗಕಜೆಕಾರು ಗ್ರಾ.ಪಂ. ಹಾಗೂ ಕಾವಳಮೂಡೂರು ಗ್ರಾಮದ ವ್ಯಾಪ್ತಿಯ ಮನೆಗಳಿಗೆ ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರು ಭೇಟಿನೀಡಿ ಪರಿಹಾರ ಕ್ರಮಕ್ಕೆ ಸೂಚಿಸಿದ್ದಾರೆ.ಕಂದಾಯ ಇಲಾಖಾ„ಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನಷ್ಟ ಅಂದಾಜಿಸಿದ್ದಾರೆ. ಮೂಡುಪಡುಕೋಡಿ ಗ್ರಾಮದ ಚಂದ್ರಶೇಖರ ಗೌಡ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಉಂಟಾಗಿದೆ. ಅವರ ಪತ್ನಿ ಸಿಡಿಲಿನ ಆಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ.
ಚೆಂಡೆವಾದಕರ ಮನೆಗೆ ಹಾನಿ:ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿರುವ ಯಕ್ಷಗಾನದ ಹಿಮ್ಮೇಳ ಚೆಂಡೆವಾದಕ ವೆಂಕಟೇಶ್ ಶೆಟ್ಟಿ ಮೂರ್ಜೆ ಅವರ ಮನೆಯ ಮೇಲೆ ಬಿರುಗಾಳಿಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.ಇದರಿಂದ ಮನೆಯ ಹೆಂಚಿನ ಛಾವಣಿಯ ಮರದ ಪಕ್ಕಾಸು ಮುರಿದು ಬಿದ್ದಿದೆ.ಹೆಂಚುಗಳು ಹುಡಿಯಾಗಿದೆ.ಮಳೆ ನೀರು ಮನೆಯೊಳಗೆ ಬಿದ್ದು ಬಟ್ಟೆ ಬರೆ,ಮನೆಯ ವಸ್ತುಗಳು ಒದ್ದೆಯಾಗಿದೆ.ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ,ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್,ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


