ಕೈಕಂಬ: ನಶಿಸಿಹೋಗಿದ್ದ `ಗೋಕಲ್ಲಿ’ಗೆ ಊರಿನ ಯುವಕರೆಲ್ಲಾ ಸೇರಿಕೊಂಡು ಸಾಂಕೇತಿಕವಾಗಿ ಪುನಶ್ಚೇತನಗೊಳಿಸಿ ಪ್ರದೇಶದ ಹೆಸರನ್ನು ಶಾಸ್ವತವಾಗಿರಿಸುವಂತೆ ಮಾಡಿದ್ದಾರೆ. ಏನದು ಗೋಕಲ್ಲು? ಗುರುಪುರ ಕೈಕಂಬ ಸಮೀಪದ ಮಳಲಿ ಆಸುಪಾಸು ಸಾಕಷ್ಟು ಕಡಿದಾದ ಗುಡ್ಡಗಳಿವೆ. ಇವುಗಳು ಊರಿನ ರೈತಾಪಿ ಜನರು ಕೃಷಿ ಗದ್ದೆಗೆ ಸೊಪ್ಪು, ಅಡಿಗೆ ಮಾಡಲು ಕಟ್ಟಿಗೆ ಇತ್ಯಾದಿಗಳಿಗೆ ಬಳಕೆಯಾಗುತ್ತಿತ್ತು. ಅದಕ್ಕಿಂತಲೂ ಮುಖ್ಯವಾಗಿ ಈ ಗುಡ್ಡ ಬಳಕೆಯಾಗುತ್ತಿದ್ದದ್ದು ಜಾನುವಾರುಗಳಿಗೆ ಮೇಯಲು.
ಊರಿನ ಜನರು ತಮ್ಮ ಮನೆಯ ಜಾನುವಾರುಗಳನ್ನು ಹಟ್ಟಿಯಿಂದ ಬಿಡಿಸಿ ಗುಡ್ಡಕ್ಕೆ ಓಡಿಸುತ್ತಿದ್ದರು. ಬೆಳಿಗ್ಗೆ ಗುಡ್ಡಕ್ಕೆ ಮೇಯಲು ಹೋಗುವ ಜಾನುವಾರುಗಳು ಸಂಜೆ ತನಕ ಅಲ್ಲೇ ಮೇಯ್ದು, ಸಂಜೆಯಾದಂತೆ ತನ್ನಷ್ಟಕ್ಕೇ ಮನೆಗೆ ಬಂದು ಹಟ್ಟಿ ಸೇರುತ್ತಿದ್ದವು. ನೂರಾರು ಹಸುಗಳು ಮೇಯಲು ಬಳಕೆಯಾಗುತ್ತಿದ್ದ ಈ ಗುಡ್ಡದಿಂದ ಸೆಗಣಿ ಹೆಕ್ಕಿ ತರಲೆಂದೇ ಜನರು ತೆರಳಿ ಅದನ್ನೂ ಉರುವಲಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು.
ಜಾನುವಾರುಗಳಿಗೆ ಗುಡ್ಡಕ್ಕೆ ತೆರಳಲೆಂದು ಗುಡ್ಡದಲ್ಲೇ ಹಾದಿಯೊಂದು ನಿರ್ಮಾಣಗೊಂಡಿತ್ತು. ಈ ಗುಡ್ಡದಲ್ಲಿ ರಸ್ತೆ ನಿರ್ಮಾಣವಾಗುವ ಮುಂಚೆ ಜನರು ಕೈಕಂಬ, ಗಂಜಿಮಠ ಮುಂತಾದ ಕಡೆಗಳಿಗೆ ಸಂಚರಿಸಲು ಇದನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು.


ಮಳಲಿ, ಕೈಕಂಬ ಹಾಗೂ ಗಂಜಿಮಠಕ್ಕೆ ತೆರಳುವ ಅಂದರೆ ಮೂರು ರಸ್ತೆ ಸೇರುವ ಭಾಗದಲ್ಲಿ `ಗೋಕಲ್ಲು’ ಎಂಬ ಆಳೆತ್ತರದ ಕಲ್ಲಿತ್ತು. ಈ ಕಲ್ಲು ಇರುವ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿದ್ದವು ಎನ್ನುತ್ತಾರೆ ಹಿರಿಯರು.
ಬೆಳಿಗ್ಗೆ ಗುಡ್ಡ ಏರಿಕೊಂಡು ಮೇಯಲು ಬರುವ ಗೋವುಗಳು ಈ ಕಲ್ಲಿನ ಸಮೀಪ ನೂರಾರು ಸಂಖ್ಯೆಯಲ್ಲಿ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು. ಅಲ್ಲದೆ ಸಂಜೆ ಗುಡ್ಡ ಇಳಿದು ಊರು ಸೇರುವ ಮುಂಚೆಯೂ ಗೋವುಗಳು ಬಂದು ಇಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದವು. ತಲೆ ತುರಿಸಿಕೊಂಡರೆ ತಲೆಯನ್ನು ಇದೇ ಕಲ್ಲಿನಲ್ಲಿ ತಿಕ್ಕುತ್ತಿತ್ತು. ಗೋವುಗಳಿಂದಾಗಿ ಈ ಕಲ್ಲು `ಗೋಕಲ್ಲು’ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು ಎಂಬ ಅಭಿಪ್ರಾಯ ಊರವರು ವ್ಯಕ್ತಪಡಿಸುತ್ತಾರೆ.
ಪಟ್ಟಣಕ್ಕೆ ತೆರಳಲು ಹೋಗುವ ಜನರು ಕೂಡಾ ಕೊಂಚ ವಿಶ್ರಮಿಸಲು ಇದೇ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮನೆಗೆ ಕಟ್ಟಿಗೆ, ಸೊಪ್ಪು ಹೊತ್ತುಕೊಂಡು ಹೋಗುವ ಜನರು ತನ್ನ ಭಾರವಾದ ಹೊರೆಯನ್ನು ಇದೇ ಕಲ್ಲಿನ ಮೇಲೆ ಇಟ್ಟು, ವಿಶ್ರಾಂತಿ ಪಡೆದು ಆಮೇಲೆ ಮತ್ತೆ ಊರಿಗೆ ಹೊತ್ತುಕೊಂಡು ಹೋಗುತ್ತಿದ್ದರು. ಇದೇ ಕಲ್ಲಿನ ಕೊಂಚ ಮುಂದೆ ಹೋದರೆ ಕೈ ಮುಗಿಯುವ ಸ್ಥಳವೊಂದಿದೆ. ಈ ಭಾಗದಲ್ಲಿ ನಿಂತರೆ ಪೊಳಲಿ ದೇವಸ್ಥಾನ ಚೆನ್ನಾಗಿ ಕಾಣುತ್ತದೆ. ಪಟ್ಟಣಕ್ಕೆ ತೆರಳುವ ಮುಂಚೆ ಜನರು ಇಲ್ಲಿ ಕೈಮುಗಿದು ಬಳಿಕ ಮುಂದೆ ತೆರಳುತ್ತಾರೆ. ಇಂದಿಗೂ ಆ ಪರಿಪಾಠ ಬೆಳೆದುಬಂದಿದೆ.
ಒಟ್ಟಾರೆ ಗೋವುಗಳಿಂದ ಪ್ರಸಿದ್ಧಿಗೊಂಡ ಕಲ್ಲು `ಗೋಕಲ್ಲು’ ಎಂಬ ಅನ್ವರ್ಥನಾಮದಿಂದ ಪ್ರಸಿದ್ಧಗೊಂಡಿತಲ್ಲದೆ ಪ್ರದೇಶದ ಹೆಸರಾಗಿ ಮಾರ್ಪಟ್ಟಿತು..
ಗೋಕಲ್ಲು ನಾಶಗೊಂಡಿತು:
ನಾಗರೀಕತೆ ಬೆಳೆಯುತ್ತಿದ್ದಂತೆ ಕಡಿದಾದ ಭಾಗದಲ್ಲಿ ರಸ್ತೆ ನಿರ್ಮಾಣಗೊಂಡಿತು. ಗುಡ್ಡಕ್ಕೆ ಬಿಟ್ಟ ಗೋವುಗಳು ಗೋಕಳ್ಳರ ಆಹಾರವಾಯಿತು. ಹೀಗೆ ನೂರಾರು ಗೋವುಗಳನ್ನು ಗೋಕಳ್ಳರು ಅಪಹರಿಸಿದ ಪರಿಣಾಮ ಊರುವರು ಗೋವುಗಳನ್ನು ಗುಡ್ಡಕ್ಕೆ ಮೇಯಲು ಬಿಡುವುದನ್ನು ನಿಲ್ಲಿಸಿದ್ದರು.
ಕವಲು ದಾರಿ ಇದ್ದ ಜಾಗದಲ್ಲಿ ರಸ್ತೆ ನಿರ್ಮಾಣಗೊಂಡವು. ಇಷ್ಟೆಲ್ಲಾ ಆದರೆ ಬಹು ವರ್ಷಗಳ ಕಾಲ ಗೋಕಲ್ಲು ಅದೇ ಭಾಗದಲ್ಲಿ ಇತ್ತು. ಆದರೆ ಕಾಲಕ್ರಮೇಣ ದುಷ್ಕರ್ಮಿಗಳು ಅದನ್ನು ನೆಲಸಮ ಮಾಡಿದ್ದರಿಂದ ಕಲ್ಲು ನಾಶ ಹೊಂದಿತ್ತು. ಆದರೆ ಆ ಪ್ರದೇಶದ ಹೆಸರು ಮಾತ್ರ ಹಾಗೆಯೇ ಉಳಿದುಕೊಂಡಿತ್ತು.
ಸ್ಥಳೀಯ ಯುವಕರಿಂದ ಕಾಯಕಲ್ಪ:
ಗೋಕಲ್ಲಿನ ಇತಿಹಾಸವನ್ನು ಅರ್ಥಮಾಡಿಕೊಂಡ ಊರ ಯುವಕರು ಗೋಕಲ್ಲಿಗೆ ಪುನಶ್ಚೇತನ ನೀಡಿ ಗೋಕಲ್ಲು ಇದ್ದ ಜಾಗದಲ್ಲಿ ಅದೇ ರೀತಿಯ ಕಲ್ಲನ್ನು ಪ್ರತಿಷ್ಠಾಪಿಸಿ ಸಾಂಕೇತಿಕ ಮೆರುಗು ನೀಡಿದ್ದಾರೆ. ಊರ ಭಟ್ಟರನ್ನು ಕರೆಸಿ ಗೋಕಲ್ಲಿಗೆ ಪೂಜೆ ಮಾಡಿಸಿ ಸಾತ್ವಿಕ ಶಕ್ತಿಯನ್ನು ಆವಾಹನೆ ಮಾಡಿಸಿಕೊಂಡಿದ್ದಾರೆ.
ಗೋಕಲ್ಲು ಹೆಸರು ಚಿರಸ್ಥಾಯಿಯಾಗಿ ಉಳಿದುಕೊಳ್ಳುವ ಸಲುವಾಗಿ ಗೋವನ್ನು ಕರೆಸಿ ಅದಕ್ಕೆ ಪೂಜೆ ಮಾಡಿಸಿ ಬಳಿಕ ಕಲ್ಲಿಗೆ ಗೋಕಲ್ಲು ಎಂಬ ಹೆಸರನ್ನು ಸಾಶ್ವತವಾಗಿ ಇರಿಸುವಂತೆ ಮಾಡಲಾಯಿತು. ಅಲ್ಲದೆ ಊರಿನ ಹೆಸರು ಸ್ಪಷ್ಟಪಡಿಸಲು ನಾಮಫಲಕವನ್ನು ಅಳವಡಿಸಿ ಸಮಾಜ ಸೇವೆ ಮೆರೆದಿದ್ದಾರೆ. ಈ ಎಲ್ಲಾ ಕೆಲಸವನ್ನು ಊರಿನ ಶ್ರೀಕೃಷ್ಣ ಗೆಳೆಯರ ಬಳಗದ ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
-ಗಿರೀಶ್ ಮಳಲಿ



