‘ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ರೂ 50ಲಕ್ಷ ಬಿಡುಗಡೆ’
ಬಂಟ್ವಾಳ: ಜಿಲ್ಲೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರವು ತಲಾ ರೂ 50 ಲಕ್ಷ ಮೊತ್ತದ ಅನುದಾನ ಬಿಡುಗಡೆಗೊಳಿಸಿದೆ. ಈ ಅನುದಾನ ಬಳಸಿಕೊಂಡು ಅಗತ್ಯಕ್ಕೆ ತಕ್ಕಂತೆ ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರು ಕೇಳಿ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡುವುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಎಚ್ಚರಿಸಿದ್ದಾರೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಮಂಗಳವಾರ ಬಿ.ಸಿ.ರೋಡ್‍ನಲ್ಲಿ ನಡೆದ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ವಿಭಾಗ, ಮೆಸ್ಕಾಂ, ಮತ್ತು ಪಂಚಾಯಿತಿ ಪಿಡಿಒಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದ ಅವರು ಮುಂದಿನ ಮೂರು ದಿನಗಳೊಳಗೆ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ಪಡೆದು ಕಾಮಗಾರಿ ಪೂರ್ಣಗೊಳಿಸುವಂತೆ ಅವರು ತಾಕೀತು ಮಾಡಿದರು.
ಮುಂಬರುವ ಒಂದು ತಿಂಗಳ ಅವಧಿಗೆ ಹೊಸ ಕೊಳವೆ ಬಾವಿ ಕೊರೆಯುವ ಬದಲಾಗಿ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದುಕೊಂಡು ಅದರಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಪಿಡಿಒ ಮತ್ತಿತರ ಅಧಿಕಾರಿಗಳು ಮುಂದಾಗಬೇಕು ಎಂದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದ್ದು, ಬಡ್ಡಕಟ್ಟೆ ನೇತ್ರಾವತಿ ನದಿಯ ಕಾಯರ್‍ಗುಂಡಿ ಜಾಕ್‍ವೆಲ್‍ನಲ್ಲಿ 20 ದಿನಗಳಿಗೆ ಸಾಕಾಗುಷ್ಟು ನೀರು ಸಂಗ್ರಹವಿದೆ ಎಂದು ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಮಾಹಿತಿ ನೀಡಿದರು. ಪಲ್ಲಮಜಲು ಎಂಬಲ್ಲಿ ಕೊಳವೆಬಾವಿ ಕೊರೆಯಲು ಸ್ಥಳೀಯರಿಂದ ತಕರಾರು ಉಂಟಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ತಿಳಿಸುತ್ತಿದ್ದಂತೆಯೇ ಇದನ್ನು ಕೂಡಲೇ ಬಗೆಹರಿಸುವಂತೆ ಸಚಿವ ರೈ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಪಾಣಾಜೆ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್, ಮುಖ್ಯಕಾರ್ಯನಿರ್ವಹಾಣಾಧಿಕಾರಿ ಶ್ರೀವಿದ್ಯಾ, ಉಪ ಕಾರ್ಯದರ್ಶಿ ಆರ್.ಉಮೇಶ್, ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ವಿಟ್ಲ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಎಂ.ಎಸ್.ಮುಹಮ್ಮದ್, ಮಮತಾ ಎಸ್.ಗಟ್ಟಿ, ಕಮಲಾಕ್ಷಿ ಪೂಜಾರಿ, ಮಂಜುಳಾ ಮಾಧವ ಮಾವೆ, ಜಯಶ್ರೀ ಕೊಡಂದೂರು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
