ಬಂಟ್ವಾಳ: ವಿಪರೀತ ಬಿಸಿಲಿನಿಂದಾಗಿ ನೀರಿನ ಮೂಲಗಳು ಬತ್ತತೊಡಗಿದ್ದು ತಾಲೂಕಿನ ಯಾವುದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕುಡಿಯುವ ನೀರಿಲ್ಲದೆ ಜನರು ತೊಂದರೆ ಅನುಭವಿಸಿದರೆ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಧಿಕಾರಿಗೆ ಖಡಕ್ ಆದೇಶ ನೀಡಿದರು.
ಬರದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ತಾಪಂ ಎಸ್.ಜಿ.ಆರ್.ಎಸ್.ವೈ. ಸಭಾಂಗಣನದಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಸಭೆ ನಡೆಯಿತು.
ನೀರಿನ ಸಮಸ್ಯೆ ಇರುವ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಬೋರ್‍ವೆಲ್‍ಗಳನ್ನು ಕೊರೆಯುವುದು ಮತ್ತು ತೀರಾ ನೀರಿನ ಸಮಸ್ಯೆ ಇರುವ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ಕೆಲವ ತುರ್ತಾಗಿ ಮಾಡಲೇಬೇಕು ಎಂದು ಅವರು ಗ್ರಾಪಂ ಪಿಡಿಒ ಗಳಿಗೆ ಸೂಚಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ರವೀಂದ್ರ ಕಂಬಳಿ, ಪುದು ಗ್ರಾಮದ ಕುಂಪನ ಮಜಲಿನಲ್ಲಿರುವ ಬೋರ್‍ವೆಲ್‍ನಲ್ಲಿ ನೀರಿದ್ದರೂ ಅದರ ಪಂಪನ್ನು ತೆಗೆದು ಹಾಕಲಾಗಿದೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಪಂಪ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿದರೂ ಅವರು ಯಾವುದೇ ಕ್ರಮ ತೆಗೆಯುತ್ತಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಸ್ಥಳೀಯ ಗ್ರಾಪಂ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಮಾಹಿತಿ ಕೇಳಿದಾಗ, ನಾವು ಇತ್ತೀಚೆಗೆ ಬಂದವರು. ಆದ್ದರಿಂದ ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಗ್ರಾಪಂ ಅಧಿಕಾರಿಗಳು ಹೇಳಿದಾಗ ಕೋಪಗೊಂಡ ಜಿಲ್ಲಾಧಿಕಾರಿ, ಇಂತಹ ಸಭೆಗೆ ಬರುವಾಗ ಗೊತ್ತಿಲ್ಲ ಎಂದು ಹಾರೈಕೆಯ ಉತ್ತರ ನೀಡುವುದಲ್ಲ. ಸಮಗ್ರ ಮಾಹಿತಿಯ ಮೂಲಕ ಸಭೆಗೆ ಹಾಜರಾಗಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಮಂಗಳೂರು ಸಹಾಯಕ ಕಮಿಷನರ್ ಡಾ. ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮುಖ್ಯಕಾರ್ಯನಿರ್ವಹಾಣಾಧಿಕಾರಿ ಶ್ರೀವಿದ್ಯಾ, ಉಪ ಕಾರ್ಯದರ್ಶಿ ಉಮೇಶ್, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬುಡ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾ ಮಿರಾಂದ, ಬಂಟ್ವಾಳ ತಹಶೀಲ್ದಾರ್ ಪುರಂದ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
