ಧರ್ಮಸ್ಥಳ: ; ಶ್ರೀ. ಧ.ಮಂ.ಆಂಗ್ಲಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಎಪ್ರಿಲ್14 ರಂದು ಸಂವಿಧಾನಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್‍ರವರ 125ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ಆದಿತ್ಯ ಕುಮಾರ್ ಅಂಬೇಡ್ಕರ್ ರವರ ಕುರಿತು ಪಿ.ಪಿ.ಟಿ. ತಯಾರಿಸಿ ಪ್ರದರ್ಶಿಸಿದರು. ಸಹಶಿಕ್ಷಕಿ ಶ್ರೀಮತಿ. ಸನ್ಮತಿ ಸ್ಲೈಡ್‍ಶೋ ಮತ್ತು ವೀಡಿಯೋದ ಮೂಲಕ ಅಂಬೇಡ್ಕರ್‍ರವರ ಬಾಲ್ಯ, ವಿದ್ಯಾಭ್ಯಾಸ, ಕೌಟುಂಬಿಕ ಜೀವನ ಇತ್ಯಾದಿಗಳ ಕುರಿತು ವಿವರಿಸಿದರು. ಇನ್ನೋರ್ವ ಸಹಶಿಕ್ಷಕಿ ಶ್ರೀಮತಿ. ಆಶಾ ಅಂಬೇಡ್ಕರ್‍ರವರ ರಾಜಕೀಯ ವೃತ್ತಿಜೀವನ, ಅವರ ಜೀವನದ ಕೆಲವು ಕಹಿ-ಘಟನೆಗಳು, ನೇತಾರರಾಗಿ ದಲಿತರ ಪರವಾಗಿ ಹೋರಾಟ, ಭಾರತದ ಸಂವಿಧಾನ ರಚನೆಯಲ್ಲಿ ಅವರು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಸವಿವರವಾಗಿ ಅರ್ಥೈಸಿದರು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು “ಭಾರತೀಯರೆಲ್ಲರಿಗೂ ಮಹಾತ್ಮರನ್ನು ಸ್ಮರಿಸಿ ಗೌರವಿಸಲು ಇಂತಹ ಜಯಂತಿ ಆಚರಣೆಗಳು ಸದವಕಾಶ ” ಎಂದು ನುಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕುಮಾರಿ ಶಮಿತಾ ನಿರೂಪಿಸಿ, ಸ್ವಾಗತಿಸಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಲವು ಪೋಷಕರು, ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕುಮಾರಿ ಶಿವಾನಿ ಪೈ ಧನ್ಯವಾದವಿತ್ತರು.

