ಬಂಟ್ವಾಳ:ತಾಲ್ಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಸಮೀಪದ ರವಳನಾಥ ದೇವಸ್ಥಾನ ಬಳಿ ಭಾನುವಾರ ಸಂಜೆ ಆಂಬುಲೆನ್ಸ್ ಉರುಳಿ ಬಿದ್ದು ಮೂವರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಪುತ್ತೂರಿನ ಸಿರಾಜುದ್ದೀನ್, ಅನ್ಸರ್ ಮತ್ತು ಶರೀಫ್ ಎಂದು ಗುರುತಿಸಲಾಗಿದೆ. ಈ ಪೈಕಿ ಸಿರಾಜುದ್ದೀನ್ ತಂದೆ ಹಸನಬ್ಬ ಎಂಬವರಿಗೆ ಭಾನುವಾರ ಸಂಜೆ ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಇವರು ಅಲ್ಲಿನ ರೋಟರಿ ಕ್ಲಬ್ಬಿನ ಆಂಬುಲೆನ್ಸ್‍ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದರಲ್ಲಿ ರೋಗಿ ಹಸನಬ್ಬ ಮತ್ತು ಚಾಲಕ ದಿವಾಕರ ಇವರಿಗೆ ಯಾವುದೇ ರೀತಿಯ ಗಾಯವಾಗದೆ ಪಾರಾಗಿದ್ದಾರೆ ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
