ಬಂಟ್ವಾಳ: ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೃಜನಶೀಲತೆ ಮೇಳೈಸುತ್ತಿಲ್ಲ, ಈ ನಿಟ್ಟಿನಲ್ಲಿ ಸಾಕ್ಷರ ಜಿಲ್ಲೆಯ ಜನತೆ ಹೆಚ್ಚು ಚಿಂತನೆ ನಡೆಸಬೇಕು ಎಂದು ದ.ಕ.ಜಿಲ್ಲಾಧಿಕಾರಿಗಳ ಎ.ಬಿ.ಇಬ್ರಾಹಿಂ ಹೇಳಿದರು. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿನ ಕುಕ್ಕಾಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನೂಜಿಬೈಲು ಶಾಲಾ ಆವರಣದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವವನ್ನು ಉದ್ಘಾಟಿಸಿದರು ಮಾತನಾಡಿದರು.
ಬಿ.ವಿ.ಕಾರಂತರು, ಶಿವರಾಮ ಕಾರಂತರು, ಕಾರ್ನಾಡರು ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಆಯಾಮಗಳು ಇತ್ತೀಚೆಗೆ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದ ಅವರು,ಜಿಲ್ಲೆಯ ಸಾಮರಸ್ಯ, ಏಕತೆ ಹಾಗೂ ಅಭಿವೃದ್ಧಿ ಗೆ ಪೂರಕವಾಗಿ ನಮ್ಮೆಲ್ಲರ ಯೋಚನೆಗಳು ಅರಳಲಿ ಎಂದು ಹಾರೈಸಿದರು. ಕಾರಂತರ ಜೊತೆಗೆ ವೇದಿಕೆ ಹಂಚಿಕೊಂಡು ಸನ್ನಿವೇಶವನ್ನು ಸ್ಮರಿಸಿಕೊಂಡ ಅವರು,ಬಿ.ವಿ.ಕಾರಂತರು ಕೇವಲ ಮಂಚಿ-ಕುಕ್ಕಾಜೆಗೆ ಸೀಮಿತರಲ್ಲ, ಇಡೀ ನಾಡು ಅವರನ್ನು ಸ್ಮರಿಸಬೇಕೆಂದರು. ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ನೂಜಿ ನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಶುಭಹಾರೈಸಿದರು. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ನ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ್ ಐತಾಳ್, ಜೊತೆ ಕಾರ್ಯದರ್ಶಿ ಉಮಾನಾಥ ರೈ ಉಪಸ್ಥಿತರಿದ್ದರು. ರಮಾನಂದ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಸುರೇಶ್ ವಂದಿಸಿದರು.
