ಕೈಕಂಬ:  ತೆಂಕತಿಟ್ಟು ಯಕ್ಷಗಾನದ ಪ್ರಸಿದ್ಧ ಹಾಸ್ಯಗಾರ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮೀಜಾರು ಅಣ್ಣಪ್ಪ(ವ93) ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ. ಯಕ್ಷಗಾನ ಹಾಸ್ಯ ಲೋಕದಲ್ಲಿ ಹೆಸರುವಾಸಿಯಾಗಿರುವ ಮಿಜಾರು ಅಣ್ಣಪ್ಪ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕೊರಗ ಗೌಡ ಹಾಗೂ ಪಾರ್ವತಿ ದಂಪತಿಗಳ ಸುಪುತ್ರರಾಗಿ 1923ರಲ್ಲಿ ದ.ಕ. ಜಿಲ್ಲೆಯ ಮಿಜಾರು ಗ್ರಾಮದಲ್ಲಿ ಜನಿಸಿದ್ದರು. ಅಶ್ವತ್ಥಪುರದ ಶ್ರೀ ವಾಣಿವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು.

 

mijaru annappa1
ಯಕ್ಷಗಾನದತ್ತ ಆಕರ್ಷಿತರಾಗಿ ಸಣ್ಣಪ್ಪರಾಯರ ಗರಡಿಯಲ್ಲಿ ಪಳಗಿದ್ದರು. 1940ರಲ್ಲಿ ಬೆಳ್ತಂಗಡಿ ಪಟೇಲರು ನಡೆಸುತ್ತಿದ್ದ ಕೂಡ್ಲು ಮೇಳದಲ್ಲಿ ಪ್ರಥಮವಾಗಿ ಯಕ್ಷಗಾನಕ್ಕೆ ಪದಾರ್ಪಣೆಗೈದರು. ಪ್ರಸಿದ್ಧ ವಿದ್ವಾಂಸರಾಗಿದ್ದ ಕೂಡ್ಲು ಸುಬ್ರಾಯ ಶ್ಯಾನುಭಾಗರಂತಹವರ ಮಾರ್ಗದರ್ಶನ ತಮಗೆ ಆ ಕಾಲದಲ್ಲಿ ದೊರಕಿತು. 1941ರಿಂದ ಕಟೀಲು ಮೇಳಕ್ಕೆ ಸೇರ್ಪಡೆಗೊಂಡು, ಎರಡು ವರ್ಷಗಳ ತಿರುಗಾಟ, ಕಲ್ಲಾಡಿ ಕೊರಗಶೆಟ್ಟಿಯವರ ನೇತೃತ್ವದ ಇರಾ ಸೋಮನಾಥೇಶ್ವರ ಮೇಳದಲ್ಲಿ 10 ವರ್ಷ, ಕಲ್ಲಾಡಿ ವಿಠಲ ಶೆಟ್ಟಿ ಹಾಗೂ ಅವರ ಪುತ್ರ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ ಮುಂದಾಳತ್ವದ ಕರ್ನಾಟಕ ಮೇಳದಲ್ಲಿ 38 ವರ್ಷ, 2 ವರ್ಷ ಕಿಶನ್ ಹೆಗ್ಡೆಯವರ ಸಾರಥ್ಯದ ಕರ್ನಾಟಕ ಮೇಳ ಹಾಗೂ ಕೊನೆಯ 2 ವರ್ಷ ಕಟೀಲು ಮೇಳದಲ್ಲಿ ಕಲಾ ಸೇವೆ ನಡೆಸಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ಹಾಸ್ಯ ಕಲಾವಿದನಾಗಿ ಯಕ್ಷಗಾನ ಅಭಿಮಾನಿಗಳನ್ನು ರಂಜಿಸಿದರು.
ನಳದಮಯಂತಿಯ ಬಾಹುಕ, ಪಾಪಾಣ್ಣ ವಿಜಯದ ಪಾಪಣ್ಣ, ಮಾನಿಷಾದದ ವಿಕ್ಷಿಪ್ತ, ಸತ್ಯ ಹರಿಶ್ಚಂದ್ರದ ಕೌಕಭಟ್ಟ, ಕೋಟಿ ಚೆನ್ನಯದ ಪಯ್ಯಬೈದ್ಯ, ಬೇಡರ ಕಣ್ಣಪ್ಪದ ಕಾಶಿಮಾಣಿ, ಕಚ್ಚೂರ ಮಾಲ್ದಿಯ ಕಾಜುಮುಗೇರ ಹಾಗೂ ತಮ್ಮ ಜೀವಮಾನದ ಶ್ರೇಷ್ಠ ಪಾತ್ರ ಹಾಗೂ ತಮ್ಮ ಮನ ಮೆಚ್ಚುಗೆಯ ಕೌಡೂರು ಬೊಮ್ಮ ಪ್ರಸಂಗದಲ್ಲಿ ಬೊಮ್ಮನ ಪಾತ್ರಗಳಲ್ಲಿ ಸೈ ಎನ್ನಿಸಿಕೊಂಡಿದ್ದರು.
ಕಲಾ ಜೀವನದ ವೇಳೆಕಟೀಲು ಮೇಳದಲ್ಲಿ ಮಣಿಯಾಣಿ ರಾಮ, ಸಣ್ಣತಿಮ್ಮಪ್ಪ, ದೂಮಪ್ಪ, ದೊಡ್ಡ ತಿಮ್ಮಪ್ಪ, ಕಟೀಲು ಪುರುಷೋತ್ತಮ ಭಟ್ ಅಲ್ಲದೆ ಇರಾ ಹಾಗೂ ಕನರ್ಾಟಕ ಮೇಳಗಳಲ್ಲಿ ಬೋಳಾರ ನಾರಾಯಣ ಶೆಟ್ಟಿ, ಅಳಕೆ ರಾಮಯ್ಯ ರೈ, ನಾರಂಬಾಡಿ ಸುಬ್ಬಯ್ಯ ಶೆಟ್ಟಿ, ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರ ರಾವ್, ಅರುವ ಕೊರಗಪ್ಪ ಶೆಟ್ಟಿ ಮೊದಲಾದ ಮೇರು ಕಲಾವಿದರ ಓಡನಾಡಿಯಾಗಿದ್ದರು.
ದಿ. ಮಂಡೆಚ್ಚರ ಯಕ್ಷಗಾನ ಭಾಗವತಿಕೆಯಲ್ಲಿ ದೀರ್ಘಕಾಲ ಹಾಸ್ಯಗಾರರಾಗಿ ಮೆರೆದ ಕೀರ್ತಿಯೂ ಅಣ್ಣಪ್ಪರದ್ದು.
ತಮ್ಮನ್ನು ಯಾರೂ ಹಿಂಬಾಲಿಸಲು ಅಸಾಧ್ಯವಾಗಿ ಪಾತ್ರಗಳನ್ನು ರೂಪಿತಗೊಳಿಸಿದಿರಿ.
1992ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದುಬೈ-ಬೆಹರಿನ್ ಮೊದಲಾದ ಅಂತರಾಷ್ಟ್ರೀಯ ಪ್ರಶಸ್ತಿಗಳು ಕಲಾ ಜೀವನಕ್ಕೆ ಸಂದ ಗೌರವವಾಗಿದೆ.

By suddi9

Leave a Reply

Your email address will not be published. Required fields are marked *