ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಬದನಡಿ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯು ರೂ 10ಲಕ್ಷ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಇದೇ 31ರಂದು ಬೆಳಿಗ್ಗೆ ನಾಗದೇವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ರಾತ್ರಿ ನೇಮೋತ್ಸವ ನಡೆಯಲಿದೆ.

ಪೆಜಕ್ಕಳ ಶ್ರೀ ಗಂಗಾಧರ ಕಕೃಣ್ಣಾಯ ಇವರ ಪೌರೋಹಿತ್ಯದಲ್ಲಿ ನಾಗದೇವರ ಶಿಲಾವಿಗ್ರಹ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ, ಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ, ರಕ್ತೇಶ್ವರಿ, ಬೊಬ್ಬರ್ಯ ದೈವಗಳ ಪುನರ್ ಪ್ರತಿಷ್ಠೆ, ಆಶ್ಲೇಷಾ ಬಲಿ, ಮಹಾಪೂಜೆ, ರಾತ್ರಿ ಪರಿವಾರ ದೈವಗಳಿಗೆ ಪರ್ವ, ನೇಮೋತ್ಸವ ನಡೆಯಲಿದೆ.
ಇದೇ ವೇಳೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಗಂಟೆ 6-00ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು, ಬಾಳ ಮಂಗಳೂರು ಇವರಿಂದ ‘ನಾಗ ದೇವತೆ’ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ರಾತ್ರಿ ಗಂಟೆ 7-00ರಿಂದ ಪರಿವಾರ ದೈವಗಳಾದ ಧೂಮ್ರ ಧೂಮಾವತಿ, ಕೊಡಮಣಿತ್ತಾಯಿ, ಮೈಸಂದಾಯ, ಪಂಜುರ್ಲಿ ದೈವಗಳಿಗೆ ನೇಮೋತ್ಸವ ಹಾಗೂ ರಾಹು-ಗುಳಿಗ ಕೋಲ ನಡೆಯಲಿದೆ. .
ಹಿನ್ನೆಲೆ:
ಈ ಹಿಂದೆ ಜೈನ ಮನೆತನದ ಆಡಳಿತದ ಬಳಿಕ ಸುಮಾರು 150 ವರ್ಷಗಳಿಂದ ಜೀರ್ಣೋವಸ್ಥೆಯಲ್ಲಿದ್ದ ಇಲ್ಲಿನ ನಾಗಬನ ಮತ್ತು ದೈವಸ್ಥಾನ ಜಮೀನಿನಲ್ಲಿ ಕಳೆದ 2004ರಲ್ಲಿ ಗ್ರಾಮದ ಭಕ್ತಾದಿಗಳ ಸಹಕಾರದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಬಳಿಕ ನಾಗಬ್ರಹ್ಮಲಿಂಗೇಶ್ವರ ಸಹಿತ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು.
ಪ್ರತೀ ತಿಂಗಳ ಅಮಾವಾಸ್ಯೆ ದಿನದಂದು ವಿಶೇಷ ರುದ್ರಾಭಿಷೇಕ, ನಾಗತಂಬಿಲ, ಮಹಾಪೂಜೆ ಹಾಗೂ ನಾಗರಪಂಚಮಿ ದಿನದಂದು ವಿಶೇಷ ಪೂಜೆ ಮತ್ತು ವಾರ್ಷಿಕ ಜಾತ್ರೆ ನಡೆಸಲಾಗುತ್ತಿದೆ.
ಇದೀಗ ಮತ್ತೆ 12 ವರ್ಷಗಳ ಬಳಿಕ ರೂ 10ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಕ್ಷೇತ್ರವನ್ನು ಮತ್ತೆ ಪುನರ್ ನವೀಕರಣಗೊಳಿಸಿ, ನಾಗದೇವರಿಗೆ ಶಿಲಾಮಯ ಪಾಣಿಪೀಠ, ರಕ್ತೇಶ್ವರಿ ಮತ್ತು ಬೊಬ್ಬರ್ಯ ಕಟ್ಟೆ ಹಾಗೂ ಉಗ್ರಾಣ ಮತ್ತು ಕಚೇರಿ ಸಹಿತ ಆವರಣಗೋಡೆ ನಿರ್ಮಾಣಗೊಂಡಿದೆ.
ಯಾವುದೇ ಮೂಲ ಆದಾಯವಿಲ್ಲದೆ ಭಕ್ತರ ಇಚ್ಛೆಯನ್ನು ಈಡೇರಿಸುತ್ತಿರುವ ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸುವಂತೆ ಇಲ್ಲಿನ ಆಡಳಿತ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ವಿನಂತಿಸಿಕೊಂಡಿದೆ.
ಆಡಳಿತ ಸಮಿತಿ ಗೌರವಾಧ್ಯಕ್ಷ ರಮೇಶ ಪ್ರಭು ಕೆದಾಯಿಕೋಡಿ, ಅಧ್ಯಕ್ಷ ಕೃಷ್ಣ ಶೆಟ್ಟಿ ದಾರಂಪಾಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿ, ಆಡಳಿತ ಸಮಿತಿ ಖಜಾಂಚಿ ರುಕ್ಮಯ ಸಪಲ್ಯ ಬದನಡಿ, ಕಾರ್ಯದರ್ಶಿ ಶೇಖರ ಸಪಲ್ಯ ಕುಂಞಮಾರು ಮತ್ತಿತರ ನೇತೃತ್ವದಲ್ಲಿ ವಿವಿಧ ಸಮಿತಿ ಸದಸ್ಯರು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.
