ಮೂಡುಬಿದರೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದರೆ ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಜನಸಾಮನ್ಯರಿಗಾಗಿ ಕಾನೂನು ಮಾಹಿತಿ ಹಾಗೂ ಎಜೆ ದಂತ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆರೋಗ್ಯ ತಪಾಸಣಾ ಶಿಬಿರ ಮೂಡುಬಿದರೆ ನ್ಯಾಯಾಲಯದಲ್ಲಿ ನಡೆಯಿತು.
ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶ ಎಸ್‍ಟಿ ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲರಲ್ಲಿಯೂ ಕಾನೂನಿನ ಅರಿವು ಅಗತ್ಯ. ಜೀವನದ ಪ್ರತಿಹಂತದಲ್ಲೂ ನೆರವಿಗೆ ಬರುವ ಕಾನೂನು ಮಾಹಿತಿಯನ್ನು ಸಕಾದಲ್ಲಿ ಒದಗಿಸುವ ಉದ್ದೇಶದಿಂದ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಮನ್ಯರಿಗೆ ಕಾನೂನು ಮಾಹಿತಿ ನೀಡುವುದು ಮತ್ತು ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸುವುದರಿಂದ ನ್ಯಾಯಾಲಯಗಳಲ್ಲಿ ಕೇಸುಗಳ ಪ್ರಮಾಣ ಕುಸಿಯುತ್ತದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶ ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲ ಶರತ್ ಶೆಟ್ಟಿ ರೈತರು ಸಾಲದ ಕಿರುಕುಳದಿಂದ ಮುಕ್ತರಾಗುವ ಕಾನೂನು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಮೂಡುಬಿದರೆ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಜನತಾ ನ್ಯಯಾಲಯಗಳ ಮೂಲಕ ಇತ್ಯರ್ಥಗೊಂಡ ಪ್ರಕರಣಗಳ ಕುರಿತು ವಿವರ ನೀಡಿದರು. ಹಿರಿಯ ವಕೀಲ ಎಂ. ಎಸ್ ಕೋಟ್ಯಾನ್, ಎಜೆ ದಂತ ಮಹಾವಿದ್ಯಾಲಯದ ವೈದ್ಯರಾದ ಡಾ. ರಜನೀಶ್ ಜಾರ್ಜ್ ಹಾಗೂ ಸಹನಾ ಉಪಸ್ಥಿತರಿದ್ದರು. ವಕೀಲ ನಾಗೇಶ್ ಶೆಟ್ಟಿ ಸ್ವಾಗತಿಸಿದರು. ಪ್ರವೀಣ್ ಎಸ್ ಲೋಬೋ ವಂದಿಸಿದರು. ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
