ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀಣಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿ ಆಂಗ್ಲ ಭಾಷೆ ಸಹಿತ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಶಾಲೆಯಲ್ಲಿ ರೂ 3.5ಲಕ್ಷ ವೆಚ್ಚದಲ್ಲಿ ‘ರಂಗಮಂದಿರ’ ಸಹಿತ ವಿವಿಧ ಮೂಲಭೂತ ಸೌಕರ್ಯ ಮತ್ತಿತರ ಅಭಿವೃದ್ಧಿ ಕಾಮಗಾರಿ ನಡೆಸುವ ಮೂಲಕ ಇಲ್ಲಿನ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಗಮನ ಸೆಳೆದಿದ್ದಾರೆ.26btl-Balthila

26btl-Rangamandir

26btl-Teachers

ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಗಳ ಆಕರ್ಷಣೆಗೆ ಒಳಗಾಗಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಮನಗಂಡ ಇಲ್ಲಿನ ಶಿಕ್ಷಕ ಸಂತೋಷ್ ಕುಮಾರ್ ಸಲಹೆಯಂತೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಕೆಲವೊಂದು ಕ್ರಿಯಾಶೀಲ ಸದಸ್ಯರು ಕಳೆದ ಮೂರು ತಿಂಗಳ ಹಿಂದೆ ಒಟ್ಟಾಗಿ ತುರ್ತು ಸಭೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಸಹಿತ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಲು ಈ ಸಭೆಯಲ್ಲಿ ಗಂಭೀರ ಚಿಂತನೆ ನಡೆಸಿದ ಬಳಿಕ ‘ನಮ್ಮ ಊರು-ನಮ್ಮ ಶಾಲೆ’ ಯೋಜನೆಯಡಿ ಖಾಸಗಿ ಶಾಲೆ ಮಾದರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿರುವುದು ಸ್ಥಳೀಯ ನಾಗರಿಕರ ಮೆಚ್ಚುಗೆಗೆ ಕಾರಣವಾಗಿದೆ.

ಕಳೆದ 1952ರಲ್ಲಿ ಸ್ಥಳೀಯ ಕೃಷಿಕ ಶಂಕರನಾರಾಯಣ ರಾವ್ ಕಾಂದಿಲ ಎಂಬವರ ವಿಶೇಷ ಮುತುವರ್ಜಿಯಲ್ಲಿ ಆರಂಭಗೊಂಡ ಈ ಶಾಲೆಯು ಇದೀಗ ಒಟ್ಟು 81 ಸೆಂಟ್ಸ್ ಜಮೀನು ಹೊಂದಿದೆ.
ಒಟ್ಟು 137 ಮಂದಿ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಏಳು ಮಂದಿ ಶಿಕ್ಷಕರು ಹಾಗೂ ಸಂಗೀತ, ಯಕ್ಷಗಾನ, ಕ್ರಾಫ್ಟ್ ವಿಭಾಗದಲ್ಲಿ ಪ್ರತ್ಯೇಕ ಮೂವರು ಗೌರವ ಶಿಕ್ಷಕರಿದ್ದಾರೆ. ಪ್ರಸಕ್ತ ಒಂದರಿಂದ ಎಂಟನೇ ತರಗತಿ ಮಾತ್ರ ನಡೆಯುತ್ತಿದ್ದು, ಇದೀಗ ಇಲ್ಲಿನ ಅಭಿವೃದ್ಧಿ ಮತ್ತು ಶಿಕ್ಷಕವರ್ಗದ ಉತ್ಸಾಹ ಕಂಡು ಮಕ್ಕಳ ಹೆತ್ತವರು ಪ್ರೌಢಶಾಲೆ ಬೇಡಿಕೆ ಮುಂದಿಟ್ಟಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲು ಇವರ ರೂ 2ಲಕ್ಷ ಮೊತ್ತದ ಅನುದಾನದಲ್ಲಿ ‘ರಾಣಿ ಅಬ್ಬಕ್ಕ ರಂಗಮಂದಿರ’ ನಿರ್ಮಾಣಗೊಂಡಿದೆ. ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಎಂಟು ಸಾವಿರ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಕರ್ಣಾಟಕ ಬ್ಯಾಂಕಿನ ವತಿಯಿಂದ ಇಲ್ಲಿನ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಉಳಿದಂತೆ ಉದ್ಯಮಿಗಳು ಮತ್ತು ಸ್ಥಳೀಯ ದಾನಿಗಳ ಸಹಕಾರದಿಂದ ಕಂಪ್ಯೂಟರ್ ಅಳವಡಿಕೆ, ಧ್ವಜಸ್ಥಂಭ ನಿರ್ಮಾಣ, ಹೂದೋಟ ನಿರ್ಮಾಣ, ತ್ಯಾಜ್ಯ ಗುಂಡಿ ನಿರ್ಮಾಣ, ಆಟದ ಮೈದಾನ ರಚನೆ, ತೆಂಗಿನ ಮರಗಳಿಗೆ ಕಟ್ಟೆ ನಿರ್ಮಾಣ, ಶಾಲಾ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯುವ ಮೂಲಕ ಖಾಸಗಿ ಶಾಲೆ ಮಾದರಿಯಲ್ಲಿ ಕಂಗೊಳಿಸುತ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಸರ್ವ ಶಿಕ್ಷಾ ಅಭಿಯಾನ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಸುತ್ತಲೂ ಆವರಣಗೋಡೆ ನಿರ್ಮಾಣಗೊಂಡಿದೆ.

ಮುಖ್ಯಶಿಕ್ಷಕಿ ಜಯಶ್ರೀ ಎಸ್.ಔದಿ ಸಹಿತ ಶಿಕ್ಷಕರಾದ ಸಂತೋಷ್ ಕುಮಾರ್, ಶಶಿಕಲಾ, ಪ್ರೇಮ ಕುಮಾರಿ, ಕ್ಷಮಾ ಕುಮಾರಿ, ರೇಶ್ಮಾ, ಮಮತಾ ಶೆಟ್ಟಿ, ಆನಂದ ಜೋಗಿ, ರಜತಾ, ಅಕ್ಕಮಹಾದೇವಿ ಮಾತ್ರವಲ್ಲದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಶೆಟ್ಟಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎಸ್.ಮೋಹನ್ ಮತ್ತು ವಸಂತ ಸಾಲಿಯಾನ್ ಮತ್ತಿತರರ ತಂಡವು ಶಾಲೆಯ ಅಭಿವೃದ್ಧಿ ಜೊತೆಗೆ ವಾರ್ಷಿಕೋತ್ಸವ ಕಾರ್ಯಕ್ರಮದ ಯಶಸ್ವಿಗೆ ಅವಿರತ ಶ್ರಮಿಸುತ್ತಿದ್ದಾರೆ.

ಈಗಾಗಲೇ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇವರ ಪ್ರಯತ್ನದಲ್ಲಿ ಪಾಣೆಮಂಗಳೂರು ಸಮೀಪದ ಶಂಭೂರು ಮತ್ತು ಕಲ್ಲಡ್ಕ ಸಮೀಪದ ದಾಸಕೋಡಿ ಸಂಪರ್ಕ ರಸ್ತೆಯನ್ನು ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ ಮೇಲ್ದರ್ಜೆಗೇರಿಸಿ ಡಾಂಬರೀಕರಣಗೊಳಿಸಿರುವುದು ಮತ್ತಷ್ಟು ಅನುಕೂಲವಾಗಿದೆ.
ಏ.2ರಂದು ವಾರ್ಷಿಕೋತ್ಸವ:
ಕಳೆದ 12 ವರ್ಷಗಳ ಬಳಿಕ ಇದೇ ಪ್ರಥಮ ಬಾರಿ ಎಂಬಂತೆ ಏ.2ರಂದು ರಾತ್ರಿ ಶಾಲಾ ವಾರ್ಷಿಕೋತ್ಸವ ನಡೆಸಲು ಭಾರೀ ಸಿದ್ಧತೆ ನಡೆದಿದ್ದು, ಅದೇ ದಿನ ‘ರಾಣಿ ಅಬ್ಬಕ್ಕ ರಂಗಮಂದಿರ’ ಮತ್ತಿತರ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಿಗ್ಗೆ 11.30ಕ್ಕೆ ‘ಸ್ವಚ್ಛತಾ ಜಾಥಾ’, ಮಧ್ಯಾಹ್ನ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ, ಕಲ್ಲಡ್ಕ ವಿಠಲ ನಾಯಕ್ ಬಳಗದಿಂದ ‘ಗೀತ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ್, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಕರ್ಣಾಟಕ ಬ್ಯಾಂಕಿನ ಮಹಾ ಪ್ರಬಂಧಕ ರಘುರಾಮ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಮುಖ್ಯಶಿಕ್ಷಕಿ ಜಯಶ್ರೀ ಎಸ್.ಔದಿ ಇವರು ತಿಳಿಸಿದ್ದಾರೆ. -ಮೋಹನ್ ಕೆ.ಶ್ರೀಯಾನ್ ರಾಯಿ

By Suddi9

Leave a Reply

Your email address will not be published. Required fields are marked *