ಮೂಡುಬಿದಿರೆ: ಪತ್ರಿಕೋದ್ಯಮವು ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಸಮಾಜ ಘಾತುಕ ಶಕ್ತಿಗಳಿಗೆ ಮಾಧ್ಯಮಗಳಲ್ಲಿ ಮೂಡಿಬರುವ ತನಿಖಾ ವರದಿಗಳು ಸಿಂಹ ಸ್ವಪ್ನವಾಗಿದೆ. ಕ್ರೈಂ, ಕ್ರೀಡೆ, ಮನರಂಜನಾ ಸುದ್ದಿಗಳಿಗೆ ಸಿಗುವ ಪ್ರಾಮುಖ್ಯತೆ ತನಿಖಾ ವರದಿಗಳಿಗೆ ಸಿಗುತ್ತಿಲ್ಲ. ಮಾಧ್ಯಮಗಳು ಉತ್ತಮ ತನಿಖಾ ವರದಿಗಳನ್ನು ಮಾಡಿ ಸಮಾಜದ ಅನೈತಿಕತೆಯ ವಿರುದ್ಧ ಧ್ವನಿ ಎತ್ತಬೇಕು. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ವಹೀದಾ ಸುಲ್ತಾನ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಮೂರನೇ ವರ್ಷದ ಮೀಡಿಯಾ ಬಝ್, ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ಆಳ್ವಾಸ್ ಮಾಧ್ಯಮ, ಬಿತ್ತಿಪತ್ರಿಕೆ ಸುದ್ದಿಮನೆ ಹಾಗೂ ವಿದ್ಯಾರ್ಥಿ ನಿರಂಜನ ಕಡ್ಲಾರು ಸಂಪಾಧಕತ್ವದಲ್ಲಿ `ಹೊಂಗನಸು’ ಪಾಕ್ಷಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ, ಮಾಧ್ಯಮ ಸಮಾಜಮುಖಿಯಾಗಿರಬೇಕು. ತಂತ್ರಜ್ಞಾನದ ವಿಪರೀತ ಬಳಕೆ ಸಮಾಜದಲ್ಲಿ, ಮಾನವೀಯ ಸಂಬಂಧದಲ್ಲಿ ಬಿರುಕು ಮೂಡಿಸಬಾರದು. ಸತ್ವದ ಅನ್ವೇಷೆಣೆಯಲ್ಲಿ ಜಾಗರೂಕರಾಗಿಬೇಕು ಎಂದರು.
ವಿಶ್ವವಾಣಿ ಮಂಗಳೂರಿನ ವಿಶೇಷ ವರದಿಗಾರ ಜಿತೇಂದ್ರ ಕುಂದೇಶ್ವರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತನಿಖಾ ವರದಿಗಳು ಮಾಧ್ಯಮಗಳಿಗೆ ಕಿರೀಟವಿದ್ದಂತೆ. ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳಿಗಿಂತ ತನಿಖಾ ವರದಿಗಳು ಮಹತ್ವ ಪಾತ್ರವಹಿಸುತ್ತದೆ. ತನಿಖಾ ವರದಿಗಾರಿಕೆಯಲ್ಲಿ ಗುರಿ ಮಾಡಬೇಕಾಕಿರೋದು ವ್ಯಕ್ತಿಗಳನ್ನಲ್ಲ, ಸಾಂಸ್ಥಿಕ ಸ್ವರೂಪದ ಲೋಪಗಳನ್ನು.ಇದನ್ನು ಅರ್ಥ ಮಾಡಿಕೊಂಡು ವರದಿ ಮಾಡಿದರೆ ವರದಿಗಾರ ಸಮಾಜದಲ್ಲಿದೈರ್ಯದಿಂದ ಬದುಕು ಸಾಗಿಸುವಂತಹದ್ದು, ಹಾಗೂ ಸಮಾಜವನ್ನು ಬೆಳಗಿಸಬಹುದು ಎಂದರು.
ಆಳ್ವಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯಜೀವನ್ ಉಪಸ್ಥಿತರಿದ್ದರು. ನಿಧಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಜಿಶ್ನು ವಂದಿಸಿದರು.
