ಬಂಟ್ವಾಳ: ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ಆರಂಬೋಡಿ ಗ್ರಾಮದ ಕಾರಣಿಕ ಪ್ರಸಿದ್ಧ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನವು ರೂ 2.5ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ.
ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಈ ದೇವಾಲಯದಲ್ಲಿ ಕಳೆದ 1998ರಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಿಸಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆದಿದೆ. ಇಲ್ಲಿನ ಭಕ್ತರ ಸಹಕಾರದಲ್ಲಿ ಪುಟ್ಟ ಭೋಜನ ಶಾಲೆ, ಅಂಗಣ ಕಾಂಕ್ರಿಟೀಕರಣ, ಗರ್ಭಗುಡಿ ಕೆಳ ಅಂತಸ್ತಿಗೆ ತಾಮ್ರದ ಹೊದಿಕೆ, ಗಾಳಿಗೋಪುರ ನಿರ್ಮಾಣ ಮತ್ತಿತರ ಕಾಮಗಾರಿ ಅಂದಿನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಂಗತ ಪೊಡುಂಬ ಸಂಜೀವ ಶೆಟ್ಟಿ ನೇತೃತ್ವದಲ್ಲಿ ನಡೆದಿದೆ.
ಇದೀಗ ಶಿಲಾಮಯ ಸುತ್ತುಪೌಳಿ, ಆಕರ್ಷಕ ಪ್ರಧಾನ ಗೋಪುರ ಮತ್ತು ಮುಖಮಂಟಪ ನಿರ್ಮಾಣ ಸಹಿತ ಹೊರಾಂಗಣಕ್ಕೆ ಕಲ್ಲು ಹಾಸುವ ಕಾಮಗಾರಿ ಭರದಿಂದ ನಡೆಯುತ್ತಿದೆ.
ಬ್ರಹ್ಮಕಲಶೋತ್ಸವ:
ಇದೇ 14ರಿಂದ 18ರತನಕ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಸಂಭ್ರಮ ಸಡಗರದಿಂದ ನಡೆಯಲಿದ್ದು, ಮಾ.23ರಿಂದ 27ರತನಕ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ದಿನ ನಿಗದಿಗೊಂಡಿದೆ. ಇದರಿಂದಾಗಿ ಇಲ್ಲಿನ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಗೆ ಒಂದೆಡೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ವಾಸ್ತುಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿ ಇವರ ಮಾರ್ಗದರ್ಶನದಲ್ಲಿ ದೈವಜ್ಞರಾದ ಮಾಡವು ವೆಂಕಟರಮಣ ಭಟ್ ಮತ್ತು ಪ್ರವೀಣ ತಂತ್ರಿ ಮುಟ್ಟು ಇವರ ಸಲಹೆ ಜೊತೆಗೆ ಎಂಜಿನಿಯರ್ ಸೀತಾರಾಮ ಆಚಾರ್ಯ ಮಂಗಳೂರು ಇವರ ನಿರ್ದೇಶನದಲ್ಲಿ ಶಿಲ್ಪಿಗಳಾದ ಸತ್ಯವೇಲು ಕಾರ್ಕಳ, ಜಗದೀಶ ಕಾರ್ಕಳ, ಲಕ್ಷ್ಮಣ ಗೌಡ ಕೊಂಪದವು, ಭರತನ್ ಮಂಚಕಲ್ಲು ಇವರ ಕಲ್ಪನೆಯಲ್ಲಿ ಶಿಲೆಯ ಕೆತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ. ಕಾಷ್ಠಶಿಲ್ಪಿ ಯು.ಎಸ್.ಕೃಷ್ಣಯ್ಯ ಆಚಾರ್ಯ ಮಂಚಕಲ್ಲು ಇವರು ಮರದ ಕೆತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬಿ.ಸುಭಾಶ್ಚಂದ್ರ ಆಡಳಿತಾಧಿಕಾರಿಯಾಗಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ರಾಮಕೃಷ್ಣ ಚೌಟ ಕಣಿಯೂರು, ಗೌರವಾಧ್ಯಕ್ಷರಾಗಿ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕೇದಗೆ, ಗೌರವಾಧ್ಯಕ್ಷರಾಗಿ ಪಿ.ಅನಂತ ಆಚಾರ್ಯ, ಪಿ.ಕೃಷ್ಣಪ್ರಸಾದ ಆಚಾರ್ಯ ನೇತೃತ್ವದಲ್ಲಿ ವಿವಿಧ ಸಮಿತಿ ರಚನೆಗೊಂಡಿದೆ.

By Suddi9

Leave a Reply

Your email address will not be published. Required fields are marked *