ಬಂಟ್ವಾಳ:ತಾಲ್ಲೂಕಿನಲ್ಲಿ ಶನಿವಾರ ನಡೆದ ಒಟ್ಟು 34 ತಾಲ್ಲೂಕು ಮತ್ತು 9ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಬಹುತೇಕ ಶಾಂತಿಯುತವಾಗಿ ಸಂಜೆ ವೇಳೆಗೆ ಸರಾಸರಿ ಶೇ. 57.12ರಷ್ಟು ಮತದಾನ ನಡೆದಿದೆ.
ಶನಿವಾರ ಬೆಳಿಗ್ಗೆಯಿಂದಲೇ ಮತಯಂತ್ರ ಮೂಲಕ ನಿಧಾನಗತಿಯಲ್ಲಿ ಆರಂಭಗೊಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಕೆಲವೆಡೆ ಸರತಿ ಸಾಲು ದೃಶ್ಯ ಕಂಡು ಬಂದಿದ್ದು, ಉಳಿದಂತೆ ಕಳೆದ ವಿಧಾನಸಭಾ ಚುನಾವಣೆ ರೀತಿ ಎಲ್ಲಿಯೂ ಮತದಾರರಲ್ಲಿ ಉತ್ಸಾಹ ಕಂಡು ಬಂದಿಲ್ಲ.
ನರಿಕೊಂಬು ಗ್ರಾಮದ ಬೋಳಂತೂರು 104 ಮತಗಟ್ಟೆಯಲ್ಲಿ ಕನಿಷ್ಟ ಶೇ. 23. 12 ಮತದಾನ ನಡೆದಿದ್ದು, ಇಲ್ಲಿನ ಹದಗೆಟ್ಟ ರಸ್ತೆ ವಿರುದ್ಧ ಮತದಾರರು ಆಕ್ರೋಶಗೊಂಡು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿತ್ತು. ಇಲ್ಲಿನ ಒಟ್ಟು 802 ಮತದಾರರ ಪೈಕಿ ಕೇವಲ 199 ಮಂದಿ ಮಾತ್ರ ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಇದೇ ಮತಗಟ್ಟೆ ಬಳಿ 105ನೇ ಮತಗಟ್ಟೆಯಲ್ಲಿ ಕೂಡಾ ಒಟ್ಟು 715 ಮತದಾರರ ಪೈಕಿ 362 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.
ಕರಿಯಂಗಳ ಕ್ಷೇತ್ರದ ಪೊಳಲಿ. ಬಡಗಬೆಳ್ಳೂರು. ತೆಂಕಬೆಳ್ಳೂರು, ಬಡಕಬೈಲ್ , ಅಮ್ಮುಂಜೆಯಲ್ಲಿ ಚುನಾವಣೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಒಮ್ಮೆಲೆ ಮುಗಿ ಬೀಳದೆ ಸಂಜೆಯ ತನಕ ಆರಾಮವಾಗಿ ಮತ ಚಲಾಯಿಸಿದ ಮತದಾರರು ಸಂಜೆ ತನಕ ಬಿಡುವು ಮಾಡಿಕೊಂಡು ತನ್ನ ಹಕ್ಕನ್ನು ಚಲಾಯಿಸಿದ್ದಾರೆ.
ಬಗಡಬೆಳ್ಳೂರು ವ್ಯಾಪ್ತಿಯಲ್ಲಿ ಇಲ್ಲಿನ ಶಾಲಾಬಳಿ ಶೇ. 82, ಬಾಲಿಕೆ ಎಂಬಲ್ಲಿ 89.5 ದಾಖಲಾಗಿದ್ದು ಹಾಗೂ ಒರಟೀಲ್ ಎಂಬಲ್ಲಿ ಶೇ 74.5 ಮತದಾನ ದಾಖಲಾಗಿದೆ.
ತೆಂಕಬೆಳ್ಳುರು ಶಾಲೆ ಶೇ.78, ಕರಿಯಂಗಳ ವ್ಯಾಪ್ತಿಯಲ್ಲಿ 78.3, ಪಲ್ಲಿಪಾಡಿ ವ್ಯಾಪ್ತಿಯಲ್ಲಿ 78.5, ಕಲ್ಕೂಟ ಶೇ.78 ಬಡಕಬೈಲ್ ಶೇ 70 ಹಾಗೂ ಅಮ್ಮುಂಜೆಯಲ್ಲಿ 69 ಶೇ ಮತದಾನ ಚಲಾವಣೆಯಾಗಿದೆ.
ಪ್ರತಿಯೊಂದು ಮತಗಟ್ಟೆಯಲ್ಲೂ ಬಿಗಿ ಪೊಲೀಸ್ ಕಾವು ನಿಯೋಜಿಸಲಾಗಿದ್ದು, ಮತಗಟ್ಟೆಯ ಸಮೀಪ ಪ್ರಚಾರ ಕೈಗೊಳ್ಳುವುದು, ಗುಂಪಾಗಿ ಬರುವುದು, ಚಚರ್ಿಸುವುದು, ಇತ್ಯಾದಿಗಳನ್ನು ನಿಷೇಧಿಸಲಾಗಿತ್ತು. ಅಡ್ಡೂರು ಘಟನೆಯನ್ನು ಹೊರತುಪಡಿಸಿ ಉಳಿದಂತೆ ಸಂಜೆಯ ತನಕ ಶಾಂತಿಯುತವಾಗಿ ಮತದಾನ ನಡೆಯಿತು.
ಇದರಿಂದಾಗಿ ಚುನಾವಣಾಧಿಕಾರಿ ಡಾ. ಅಶೋಕ್, ತಹಶೀಲ್ದಾರ್ ಪುರಂದರ ಹೆಗ್ಡೆ ಇಲ್ಲಿನ ಮತಗಟ್ಟೆಗೆ ಭೇಟಿ ನೀಡಿದ್ದರು.
ಫರಂಗಿಪೇಟೆ ಮತ್ತು ಸಜಿಪಪಡು ಗ್ರಾಮದ ಕೆಲವೊಂದು ಮತಗಟ್ಟೆಗಳ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಕಾರ್ಯಕರ್ತರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿರುವುದಾಗಿ ತಿಳಿಸಿದ್ದಾರೆ.
ನರಿಕೊಂಬು ಮತ್ತು ಪಂಜಿಕಲ್ಲು ಮತಗಟ್ಟೆಯಲ್ಲಿ ಬೆಳಿಗ್ಗೆ ಮತಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಕೆಲಹೊತ್ತು ಮತದಾನ ವಿಳಂಬವಾಗಿರುವುದು ಕಂಡು ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೊಡಂಕಾಪು ಸಮೀಪದ ತೊಡಂಬಿಲ ಮತಗಟ್ಟೆ ಮತ್ತು ಸಜಿಪಮುನ್ನೂರು ಜಿಲ್ಲಾ ಪಂಚಾಯಿತಿ ಅಭ್ಯರ್ಥಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಕಲ್ಲಡ್ಕ ಸಮೀಪದ ಗೋಳ್ತಮಜಲು ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಇಲ್ಲಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಮತಗಟ್ಟೆ ಅಧಿಕಾರಿ ಮಹಾಬಲೇಶ್ವರ ಭಟ್ ಎಂಬವರು ಚುನಾವಣಾ ಕರ್ತವ್ಯ ನಡುವೆ ಕೆಲಹೊತ್ತು ನಿದ್ರೆಗೆ ಜಾರಿ ಮತದಾರರ ಮೊಬೈಲ್ ವಾಟ್ಸಾಪ್ ಮೂಲಕ ಸುದ್ದಿಗೆ ಗ್ರಾಸವಾದ ಘಟನೆಯೂ ನಡೆದಿದೆ.
ಗಾಯ:
ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಗೆ ರಿಕ್ಷಾ ಮೂಲಕ ಇಲ್ಲಿನ ರಾಯಿ ಪೇಟೆಯಿಂದ ಬಂದು ಇಳಿಯುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ಬೊಲ್ಲೋಡಿ ನಿವಾಸಿ ಪೂವಪ್ಪ ಪೂಜಾರಿ ಸಹಿತ ಮೂವರು ಮತದಾರರು ಗಾಯಗೊಂಡು ಸಿದ್ಧಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದು ಬಂದಿದೆ.
ತಾಲ್ಲೂಕಿನಾದ್ಯಂತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತು ಏರ್ಪಡಿಸಿದ ಪರಿಣಾಮ ಯಾವುದೇ ಅಇತಕರ ಘಟನೆ ಸಂಭವಿಸದೆ ಶಾಂತಿಯುತ ಮತದಾನ ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


