ಮೂಡುಬಿದಿರೆ: ಮನೆಯಿಂದ ಆಸ್ಪತ್ರೆಗೆ ಹೋಗುತಿದ್ದ ಯುವಕನೊಬ್ಬ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬಳು ಆತನನ್ನು ಅಡ್ಡಗಟ್ಟಿ ಮೆಣಸಿನ ಹುಡಿ ಎರಚಿದ ಘಟನೆ ಬಡಗಮಿಜಾರ ಗ್ರಾಮದ ಕೊಪ್ಪದ ಕುಮೇರ್ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕೊಪ್ಪದ ಕುಮೇರ್ ನಿವಾಸಿ, ಭಾನುವಾರ ರಾತ್ರಿ ರವಿ ದೇವಾಡಿಗ ಎಂಬವರಿಂದ ಹಲ್ಲೆಗೊಳಗಾಗಿದ್ದ ದಿನೇಶ್ ಎಂಬವರೇ ಮತ್ತೆ ಹಲ್ಲೆಗೊಳಗಾದವರಾಗಿದ್ದಾರೆ. ಭಾನುವಾರ ರವಿ ದೇವಾಡಿಗ ಹಾಗೂ ಅವರ ಪುತ್ರಿಯರು ದಿನೇಶ್ ಅವರ ಮೇಲೆ ಹಲ್ಲೆ ನಡೆಸಿದ್ದು, ದಿನೇಶ್ ಹಾಗೂ ಸ್ಥಳೀಯರು ಮಂಗಳವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಲ್ಲೆ ಪ್ರಕರಣದಲ್ಲಿ ಗಾಯಗೊಳಗಾಗಿದ್ದ ದಿನೇಶ್ ಅವರು, ಮೂಡುಬಿದಿರೆ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ,ರವಿ ದೇವಾಡಿಗನ ಪತ್ರಿಯರು ದ್ವಿಚಕ್ರ ವಾಹನ ಅಡಗಟ್ಟಿ ಮತ್ತೆ ಹಲ್ಲೆ ನಡೆಸಿದ್ದಾರೆ. ರವಿ ದೇವಾಡಿಗ ಅವರ ಮನೆಯ ಬಳಿಯ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ದಿನೇಶ್ ಹಾದು ಹೋಗುತ್ತಿದ್ದ ಸಂದರ್ಭ ರವಿ ದೇವಾಡಿಗ ಅವರ ಪುತ್ರಿಯೊಬ್ಬಳು ಅಡ್ಡಗಟ್ಟಿದ್ದಾಳೆ. ಬಳಿಕ ಮೆಣಸಿನ ಹುಡಿ ಎರಚಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸಿದರು. ರವಿ ದೇವಾಡಿಗ ಹಾಗೂ ಆತನ ಪುತ್ರಿಯರು ಅಮಾಯಕರ ಮೇಲೆ ಹಲ್ಲೆ ನಡೆಸುವುದು, ಯುವಕರ ಮೇಲೆ ಸುಳ್ಳು ಆರೋಪ ಮಾಡಿರುವುದು ಹೆಚ್ಚಾಗುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು, ಅವರನ್ನು ಬಡಗಮಿಜಾರು ಗ್ರಾಮದಿಂದ ಗಡಿಪಾರು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಮೂಡುಬಿದರೆ ಪುರಸಭಾ ವ್ಯಾಪ್ತಿಯ ಕೋಟೆಬಾಗಿಲು-ಸುಭಾಸ್‍ನಗರ ಕೂಡ ಕಳೆದ ವರ್ಷ ಈ ಕುಟುಂಬ ಇದೇ ರೀತಿ ಅವಾಂತರ ಮಾಡಿ, ಸ್ಥಳೀಯ ಯುವಕರ ಮೇಲೆ ಸುಳ್ಳು ಆರೋಪ ಮಾಡಿರುವುದು ಕೇಸು ಕೂಡ ಮುಡುಬಿದರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.






