ಬಂಟ್ವಾಳ: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತ ನೀಡುವುದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯಾಂದ್ಯಂತ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದ ಕಂಗೆಟ್ಟ ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ವಿವಿಧ ಸುಳ್ಳು ಆರೋಪಕ್ಕೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್ ಅವರು ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಲ್ಲಿನ ಸರಪಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಮರ್ಥ ಸಂಘಟಕ, ಜನಸ್ನೇಹಿ ನಾಯಕ ಬಿ.ಪದ್ಮಶೇಖರ ಜೈನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸ್ವೀಕರಿಸಿ ಸಿಂಧು ಎಂದು ಘೋಷಿಸಿದ್ದರೂ ಇವರ ವಿರುದ್ದ ಅನಗತ್ಯ ಸುಳ್ಳು ಆಪಾದನೆ ಮತ್ತು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಈ ಹಿಂದೆ ಇಲ್ಲಿನ ಕಾವಳಮೂಡೂರು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗರಿಷ್ಟ ಮತದಿಂದ ಗೆಲುವು ಸಾಧಿಸಿರುವ ಬಿ.ಪದ್ಮಶೇಖರ್ ಜೈನ್ ವಿರುದ್ಧ ಅನಗತ್ಯ ಆರೋಪ ಮಾಡುವ ಬದಲಾಗಿ ಬಿಜೆಪಿ ನಾಯಕರು ನೇರ ಸ್ಪರ್ಧೆ ಎದುರಿಸಲಿ ಎಂದು ಸವಾಲು ಹಾಕಿದರು. ಇವರನ್ನು ನೇರವಾಗಿ ಎದುರಿಸುವುದು ಅಸಾಧ್ಯ ಎಂಬುದನ್ನು ಅರಿತ ಬಿಜೆಪಿ ವಿವಿಧ ಷಡ್ಯಂತ್ರ ರೂಪಿಸಿ ಅಡ್ಡ ದಾರಿ ಮೂಲಕ ಗೆಲುವು ಸಾಧಿಸಲು ಹೊರಟು ಚುನಾವಣಾಧಿಕಾರಿಗಳಿಗೆ ಒತ್ತಡ ಹೇರಿ ನಾಮಪತ್ರ ಅಸಿಂಧುಗೊಳಿಸಲು ವಿಫಲ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ಇಲ್ಲಿನ ಕಾಂಗ್ರೆಸ್ ತಾಲ್ಲೂಕು ಮತ್ತು ಜಿಲ್ಲಾಪಂಚಾಯಿತಿ ಸದಸ್ಯರು ಹೊಂದಿದ್ದ ಕ್ಷೇತ್ರಗಳು ಸಮಗ್ರ ಅಭಿವೃದ್ಧಿ ಕಂಡಿದೆ. ಇದರಿಂದಾಗಿ ಬಿಜೆಪಿ ಸದಸ್ಯರನ್ನು ಹೊಂದಿದ್ದ ಸಂಗಬೆಟ್ಟು ಮತ್ತು ಸರಪಾಡಿ ಮತ್ತಿತರ ಕ್ಷೇತ್ರಗಳು ಅಲ್ಲಿನ ನಿಷ್ಕ್ರಿಯ ಸದಸ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ ಎಂದು ದೂರಿದರು.
ಅರಣ್ಯ ಸಚಿವರ ತವರು ಕ್ಷೇತ್ರದಲ್ಲಿ ವ್ಯಾಪಕ ಮರಳು ದಂಧೆ, ಮರಕಳ್ಳತನ, ಕ್ರಿಮಿನಲ್ಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಬಿಜೆಪಿಯು ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸಾಧನೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಜಿಲ್ಲೆಯ ವಿವಿಧ ದೇವಸ್ಥಾನ, ದೈವಸ್ಥಾನ ಮತ್ತಿತರ ಧಾರ್ಮಿಕ ಕ್ಷೇತ್ರಗಳ ಜೀರ್ಣೊದ್ಧಾರ ಸಂದರ್ಭದಲ್ಲಿ ಪಕ್ಷಬೇಧ ಮರೆತು ಕಾನೂನು ಬದ್ದವಾಗಿ ಸಚಿವರು ಮರಮಟ್ಟುಗಳನ್ನು ದೊರಕಿಸಿಕೊಟ್ಟಿರುವುದನ್ನು ಅಲ್ಲಿನ ಭಕ್ತರು ಮತ್ತು ಜನತೆ ಮರೆತಿಲ್ಲ ಎಂದು ಅವರು ತಿಳಿಸಿದರು.
